ಬೆಳಗಾವಿ: ರಾಜ್ಯದಲ್ಲಿ ಎರಡನೇ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ನೀಡಲು ಕಾಂಗ್ರೆಸ್ ಹೈಕಮಾಂಡ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು ಅಹಿಂದ ನಾಯಕರೆಂದು ಗುರುತಿಸಿಕೊಂಡಿರುವ ಸತೀಶ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ.
2019 ರ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಯಲ್ಲಿ ಏಕಾಂಗಿ ಹೋರಾಟ ನಡೆಸಿ ಜಿಲ್ಲೆಯ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವುದಕ್ಕೆ ಕಾಲಿಗೆ ಚಕ್ರ ಕಟ್ಟಿಕೊಂಡು ಶ್ರಮವಹಿಸಿದ್ದ ಸತೀಶ ಜಾರಕಿಹೊಳಿ ಅವರಿಗೆ ಕೊನೆಗೂ ಕೆಪಿಸಿಸಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಉನ್ನತ ಹುದ್ದೆ ನೀಡಿದೆ.
ಪಕ್ಷಾಂತರ ಪರ್ವದಿಂದ ಬಣಗಳಾಗಿ ಮಕಾಡೆ ಮಲಗಿದ್ದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ಸಿಗೆ ಮರುಜೀವ ಕೊಡಲು ಸತೀಶ ಜಾರಕಿಹೊಳಿ ಅವರನ್ನು ನೇಮಕ ಮಾಡಿದ್ದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದೆ.
ಪಕ್ಷ ನಿಷ್ಠೆಗಾಗಿ ಮತ್ತು ಸರಳ ಸಜ್ಜನಿಕೆಯ ರಾಜಕಾರಣಿ ಎಂದು ಗುರುತಿಸಿಕೊಂಡಿರುವ ಸತೀಶ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ ಸಾಧಿಸುವಂತೆ ಮ್ಯಾಜಿಕ್ ಮಾಡುತ್ತಾರೆ ಎಂಬ ವಿಶ್ವಾಸ ಕಾರ್ಯಕರ್ತರಲ್ಲಿ ಮನೆ ಮಾಡಿದ್ದು ಸವಾಲುಗಳನ್ನು ಎದುರಿಸಿ ಎಲ್ಲರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಸಂಪೂರ್ಣ ಜವಾಬ್ದಾರಿ ಈಗ ಸತೀಶ ಅವರ ಹೆಗಲಿಗೆ ಬಿದ್ದಿದೆ.
ಜಿಲ್ಲಾ ರಾಜಕೀಯ ಜೊತೆ ರಾಜ್ಯಾದ್ಯಂತ ಕೂಡ ಪಕ್ಷ ಬಲವರ್ಧನೆಯ ಸವಾಲು ಸತೀಶ ಜಾರಕಿಹೊಳಿ ಎದುರಾಗಿದೆ. ಇದನ್ನು ನಿಭಾಯಿಸುವ ಸಾಮರ್ಥ್ಯವು ಕೂಡ ಸತೀಶ ಅವರಲ್ಲಿ ಇದೆ ಎಂಬುದರ ಬಗ್ಗೆ ಯಾವುದೇ ಅನುಮಾನವಿಲ್ಲ ಎನ್ನುತ್ತಾರೆ ರಾಜಕೀಯ ಪರಿಣಿತರು