ಹೈದರಾಬಾದ್: ವಕ್ಫ್ ಆಸ್ತಿಗಳ ಅತಿಕ್ರಮಣ ಮತ್ತು ಖಾಸಗೀಕರಣದ ವಿರುದ್ಧ ನ್ಯಾಯಾಲಯದಲ್ಲಿ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದ ಹಿರಿಯ ವಕೀಲ ಖಾಝಾ ಮೊಯಿಝುದ್ದೀನ್ (63) ಅವರನ್ನು ಶನಿವಾರ ಮುಂಜಾನೆ ಕಾರು ಢಿಕ್ಕಿ ಹೊಡೆಸಿ ಅತ್ಯಂತ ದಾರುಣವಾಗಿ ಕೊಲೆ ಮಾಡಲಾಗಿದೆ.
ಮೇಲ್ನೋಟಕ್ಕೆ ಇದು ಸಾಮಾನ್ಯ ಅಪಘಾತದಂತೆ ಕಂಡರೂ, ಇದರ ಹಿಂದೆ ದೊಡ್ಡ ಭೂಮಾಫಿಯಾ ಕೈವಾಡವಿದ್ದು, ಇದೊಂದು “ಯೋಜಿತ ಮತ್ತು ವ್ಯವಸ್ಥಿತ ಕೊಲೆ” ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಕೇವಲ 20 ಅಡಿ ದೂರಕ್ಕೆ ಎಸೆಯಲ್ಪಟ್ಟ ವಕೀಲ!
ಶನಿವಾರ ಮುಂಜಾನೆ ಸುಮಾರು 5.30ರ ವೇಳೆಗೆ ವಕೀಲ ಖಾಝಾ ಮೊಯಿಝುದ್ದೀನ್ ಅವರು ಎಂದಿನಂತೆ ಈಜು ತರಬೇತಿಗೆ ತೆರಳಲು ಹೈದರಾಬಾದ್‌ನ ಶಾಂತಿ ನಗರದಲ್ಲಿರುವ ತಮ್ಮ ಮನೆಯಿಂದ ಹೊರಗೆ ಬಂದಿದ್ದರು. ಅವರು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ತಮ್ಮ ಕಾರಿನ ಬಳಿ ನಿಂತಿದ್ದಾಗ, ಹಿಂದಿನಿಂದ ಅತೀ ವೇಗವಾಗಿ ಬಂದ ಹಸಿರು ಬಣ್ಣದ ಸ್ಕಾರ್ಪಿಯೋ ಎಸ್‌ಯುವಿ ಕಾರು ಅವರಿಗೆ ನೇರವಾಗಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ವಕೀಲರು ಸುಮಾರು 20 ಅಡಿ ದೂರಕ್ಕೆ ಹಾರಿ ಬಿದ್ದಿದ್ದಾರೆ. ಅಪಘಾತ ಎಸಗಿದ ತಕ್ಷಣ ಕಾರಿನಲ್ಲಿದ್ದ ಕಿರಾತಕರು ಸ್ಥಳದಿಂದ ವೇಗವಾಗಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಕೊಲೆಯ ಹಿಂದೆ ಶಿಕ್ಷಣ ಸಂಸ್ಥೆಗಳ ಮಾಫಿಯಾ?
ಮೃತರ ಪುತ್ರ ಮೊಹಮ್ಮದ್ ಫರ್ಹಾನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಗರದ ಇಬ್ಬರು ಪ್ರಭಾವಿ ಶಿಕ್ಷಣ ತಜ್ಞರ ಹೆಸರನ್ನು ಉಲ್ಲೇಖಿಸಿದ್ದಾರೆ.
“ಹೈದರಾಬಾದ್‌ನಲ್ಲಿರುವ ಮೂರು ವಕ್ಫ್ ಶಿಕ್ಷಣ ಸಂಸ್ಥೆಗಳ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳನ್ನು ಕೆಲವು ಖಾಸಗಿ ಟ್ರಸ್ಟ್‌ಗಳು ನುಂಗಿಹಾಕಲು ನೋಡುತ್ತಿದ್ದವು. ಸಾರ್ವಜನಿಕ ಆಸ್ತಿಯನ್ನು ಖಾಸಗೀಕರಣ ಮಾಡಬಾರದು ಎಂದು ನನ್ನ ತಂದೆ ಕೋರ್ಟ್‌ನಲ್ಲಿ ಹೋರಾಡುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗಿದೆ” ಎಂದು ಪುತ್ರ ಕಣ್ಣೀರು ಹಾಕಿದ್ದಾರೆ.
ಈ ಹಿಂದೆಯೂ ನಡೆದಿತ್ತು 5 ಬಾರಿ ಕೊಲೆ ಯತ್ನ!
ವಕೀಲ ಖಾಝಾ ಮೊಯಿಝುದ್ದೀನ್ ಅವರಿಗೆ ಕೇಸ್ ವಾಪಸ್ ಪಡೆಯುವಂತೆ ಹಾಗೂ ಕೋಟಿ ಕೋಟಿ ಹಣ ಪಡೆದು ಸುಮ್ಮನಿರುವಂತೆ ನಿರಂತರವಾಗಿ ಬೆದರಿಕೆಗಳು ಬರುತ್ತಿದ್ದವು. ಈ ಹಿಂದೆ ಅವರ ಕಚೇರಿ ಮತ್ತು ಮನೆಯ ಸಮೀಪದ ಮಸೀದಿ ಬಳಿ ಒಟ್ಟು 5 ಬಾರಿ ಜೀವಹರcompatibility ದಾಳಿಗಳು ನಡೆದಿದ್ದವು ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ಅವರ ಮಗನ ಕಚೇರಿಗೂ ಬಂದು ದುಷ್ಕರ್ಮಿಗಳು ಧಮಕಿ ಹಾಕಿದ್ದರು ಎನ್ನಲಾಗಿದೆ.
ಕಣ್ವಿಟ್ಟ ಪೊಲೀಸರು: 5 ವಿಶೇಷ ತಂಡಗಳ ರಚನೆ:
ಘಟನೆಯ ಗಂಭೀರತೆಯನ್ನು ಅರಿತುಕೊಂಡ ಸಿಕಂದರಾಬಾದ್ ಡಿಸಿಪಿ ರಕ್ಷಿತಾ ಕೃಷ್ಣಮೂರ್ತಿ ಅವರು, ಮಗನ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆಗಾಗಿ ಸದ್ಯ 5 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ತೀವ್ರಗೊಳಿಸಲಾಗಿದೆ. ಇತ್ತ ತೆಲಂಗಾಣ ಹೈಕೋರ್ಟ್ ವಕೀಲರ ಸಂಘವು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥರನ್ನು ತಕ್ಷಣವೇ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದೆ.
Laxmi News 24×7