ಚಿಕ್ಕೋಡಿ (ಬೆಳಗಾವಿ): ಲಾಕ್‍ಡೌನ್ ಹಿನ್ನೆಲೆ ರಾಜ್ಯದಲ್ಲಿ ಮದ್ಯದ ಅಂಗಡಿ ಬಂದ್ ಆಗಿವೆ. ಪರಿಣಾಮ ಕುಡಿಯುವುದಕ್ಕೆ ಎಣ್ಣೆ ಸಿಗಲಿಲ್ಲವೆಂದು ಬಾವಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕೋಡಿ ತಾಲೂಕಿನ ಕೋಥಳಿ ಗ್ರಾಮದಲ್ಲಿ ನಡೆದಿದೆ.
ಕೋಥಳಿ ಗ್ರಾಮದ ಪೋಪಟ್ ಈರಪ್ಪ ಬಡಿಗೇರಿ (44) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಮದ್ಯದ ಅಂಗಡಿ ಬಂದ್ ಆಗಿದ್ದರಿಂದ ಪೋಪಟ್ ಸೋಮವಾರ ಕುಡಿಯುವುದಕ್ಕೆ ಎಣ್ಣೆ ಸಿಗಲಿಲ್ಲವೆಂದು ಕೋಥಳಿ ಗ್ರಾಮದ ಗಲ್ಲಿ ಗಲ್ಲಿ ಸುತ್ತಿ ನಾಪತ್ತೆಯಾಗಿದ್ದ. ಆದರೆ ಇಂದು ಗ್ರಾಮದ ಹೊರವಲಯದಲ್ಲಿರುವ ಬಾವಿಯಲ್ಲಿ ಶವ ಪತ್ತೆಯಾಗಿದೆ.
ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಖಡಕಲಾಟ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಖಡಕಲಾಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 14ರವರೆಗೂ ಮದ್ಯ ಇಲ್ಲ:
ಕುಡುಕರ ಮೇಲೆ ಕೊರೊನಾ ಸೈಡ್ ಎಫೆಕ್ಟ್ ಜಾಸ್ತಿ ಆಗಿದೆ. ಖಿನ್ನತೆಗೆ ಒಳಗಾಗಿ ಇದುವರೆಗೂ 10ಕ್ಕೂ ಹೆಚ್ಚು ವ್ಯಸನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕೇರಳ ಮಾದಿಯನ್ನು ಅನುಷ್ಠಾನಕ್ಕೆ ತರಬಹುದು ಎಂಬ ಊಹೆ ಸುಳ್ಳಾಗಿದೆ.
ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಏಪ್ರಿಲ್ 14ರವರೆಗೂ ಮದ್ಯದಂಗಡಿ ತೆರಯುವ ಪ್ರಶ್ನೆಯೇ ಇಲ್ಲ. ಮದ್ಯ ಬೇಕು ಎನ್ನುವವರು ಇನ್ನೂ ಎರಡು ವಾರ ಕಾಯಲೇ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಬಸವರಾಜು ಬೊಮ್ಮಾಯಿ ಮಾತನಾಡಿ, ಈಗಲೇ ರಾಜ್ಯದಲ್ಲಿ ಪರಿಸ್ಥಿತಿ ಸಾಕಷ್ಟು ಬಿಗಡಾಯಿಸಿದೆ. ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ಅವರ ಮೇಲೆ ಅವರಿಗೇ ನಿಯಂತ್ರಣ ಇರಲ್ಲ ಎಂದಿದ್ದಾರೆ. ಅಲ್ಲದೆ ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದಿದ್ದಾರೆ. ಈ ಮಧ್ಯೆ, ಕೇರಳದಲ್ಲಿ 45 ಮಂದಿ ಕುಡುಕರು, ವೈದ್ಯರಿಂದ ಚೀಟಿ ಬರೆಯಿಸಿಕೊಂಡು ಮದ್ಯ ಪಡೆದುಕೊಂಡಿದ್ದಾರೆ.