ಬೆಳಗಾವಿ -: ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದ ಬಾಲಕಿಯೊಬ್ಬಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಚೇರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ನಮ್ಮ ತಾಯಿಗೆ ಮೂತ್ರಕೋಶದ (ಕಸಿ)ಮರುಜೋಡಣೆ ಶಸ್ತ್ರಚಿಕಿತ್ಸೆಯಾಗಿದೆ. ಅವರು ನಿತ್ಯವೂ ಸೇವಿಸಬೇಕಾದ ಮಾತ್ರೆಗಳು ಮುಗಿದು ಹೋಗಿರುವುದರಿಂದ ದಯವಿಟ್ಟು ಮಾತ್ರೆಗಳನ್ನು ಪೂರೈಸಿರಿ ಎಂದು ಮುಖ್ಯಮಂತ್ರಿ ಸಹಾಯವಾಣಿಗೆ ಕರೆ ಮಾಡಿ ಕಣ್ಣೀರಿಟ್ಟಿದ್ದಾರೆ.
ಶುಕ್ರವಾರ(ಏ.೧೦) ಸಂಜೆ 6 ಗಂಟೆ ಸುಮಾರಿಗೆ ಸಿಎಂ ಕಚೇರಿಯ ಹಿರಿಯ ಅಧಿಕಾರಿಗಳು, ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿ, ರಾಮದುರ್ಗ ತಾಲೂಕಿನ ನರಸಾಪುರ ಗ್ರಾಮದಲ್ಲಿರುವ ಸೇಕವ್ವ ಅರಭಾಂವಿ(45) ಅವಳಿಗೆ ಮಾತ್ರೆಗಳನ್ನು ಪೂರೈಸುವಂತೆ ತಿಳಿಸಿದ್ದರು.
ಕೂಡಲೇ ಸಿಎಂ ಕಚೇರಿಯ ಕರೆಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಬೆಳಗಾವಿಯ ತಹಶೀಲ್ದಾರರ ಮೂಲಕ ಅವರಿಗೆ ಒಂದು ತಿಂಗಳಿಗೆ ಅಗತ್ಯವಿರುವ ಮಾತ್ರೆಗಳನ್ನು ಅವರ ಮನೆ ಬಾಗಿಲಿಗೆ ಕಳುಹಿಸಿಕೊಡುವ ಮೂಲಕ ಬಾಲಕಿಯ ಮನವಿಗೆ ತಕ್ಷಣ ಸ್ಪಂದಿಸಿದ್ದಾರೆ.