Breaking News
Home / ರಾಜಕೀಯ / ತೊದಲು ನುಡಿಯಲ್ಲೇ ಲೋಕಜ್ಞಾನ ತೆರೆದಿಡುವ ಮಗು; ಎರಡೂವರೆ ವರ್ಷದ ಬಾಲಕಿ ಜ್ಞಾಪಕ ಶಕ್ತಿಗೆ ಬೆರಗಾದ ಬಾಗಲಕೋಟೆ ಮಂದಿ

ತೊದಲು ನುಡಿಯಲ್ಲೇ ಲೋಕಜ್ಞಾನ ತೆರೆದಿಡುವ ಮಗು; ಎರಡೂವರೆ ವರ್ಷದ ಬಾಲಕಿ ಜ್ಞಾಪಕ ಶಕ್ತಿಗೆ ಬೆರಗಾದ ಬಾಗಲಕೋಟೆ ಮಂದಿ

Spread the love

ಬಾಗಲಕೋಟೆ: ಮಕ್ಕಳಿರಲವ್ವ ಮನೆ ತುಂಬ, ಕೂಸು ಕಂದಯ್ಯ ಒಳ ಹೊರಗಾ ಆಡಿದರ ಬೀಸಣಿಕೆ ಗಾಳಿ ಸುಳಿದಾವ ಎಂಬ ಮಾತು ಇದೆ. ಮಕ್ಕಳಿದ್ದ ಮನೆಯಲ್ಲಿ ಪ್ರತಿದಿನವೂ ಸಂಭ್ರಮ, ಅವುಗಳ ತೊದಲು ನುಡಿ ತುಂಟಾಟ ನೋಡುವುದೇ ಅಂದ ಎಂಬುವುದು ಇದರ ಅರ್ಥ. ಇದಕ್ಕೆ ಪುಷ್ಠಿ ನೀಡುವಂತೆ ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಓರ್ವ ಅಸಾಮಾನ್ಯ ಬಾಲಕಿ ಇದ್ದು, ಆಕೆಯ ಹೆಸರು ಸಮನ್ವಿತಾ ಕರಕಟ್ಟಿ. ವಯಸ್ಸು ಕೇವಲ ಎರಡುವರೆ ವರ್ಷ,ಆದರೆ ಈಕೆಯ ಸಾಧನೆ ಮಾತ್ರ ಅದಾಗಲೇ ದಾಖಲೆ ಪಟ್ಟಿಯಲ್ಲಿ ಸೇರಿಬಿಟ್ಟಿದೆ.

ಚಾಲುಕ್ಯರ ನಾಡು ಬಾದಾಮಿಯ ಗಾರ್ಡನ್ ಕಾಲೋನಿಯ ನಿವಾಸಿಗಳಾದ ವೀರೇಶ್ ಕರಕಟ್ಟಿ ಹಾಗೂ ಅಶ್ವಿನಿ ಕರಕಟ್ಟಿ ಅವರ ಮಗಳಾದ ಸಮನ್ವಿತಾ ಓರ್ವ ಪುಟ್ಟ ಪ್ರತಿಭೆಯ ಖಣಿ ಅಂದರೆ ತಪ್ಪಿಲ್ಲ. ಈಕೆಯ ಜ್ಞಾಪಕ ಶಕ್ತಿ ಎಳೆ ವಯಸ್ಸಲ್ಲೇ ಅಡಗಿರುವ ಬಹುದೊಡ್ಡ ಪ್ರತಿಭೆ. ಸಾಮಾನ್ಯವಾಗಿ ಈ ವಯಸ್ಸಲ್ಲಿ ಮಕ್ಕಳು ಮಾತಾಡೋದೆ ಅಪರೂಪ. ಮಾತಾಡಿದರೂ ಅದು ತೊದಲು ನುಡಿ, ಆದರೆ ಇಲ್ಲಿ ಸಮನ್ವಿತಾ ಮಾತ್ರ ತನ್ನ ತೊದಲು ನುಡಿಯಲ್ಲಿ 28 ರಾಜ್ಯಗಳ ರಾಜಧಾನಿ, 25 ದೇಶದ ರಾಜಧಾನಿ, 18 ರಾಜ್ಯಗಳ ಮುಖ್ಯಮಂತ್ರಿಗಳ ಹೆಸರು, 30 ರಾಸಾಯನಿಕ ಸಂಕೇತದ ಹೆಸರು, ನೊಬೆಲ್ ಪುರಸ್ಕೃತರ ಹೆಸರನ್ನು ಪಟ್ಟಂತ ಹೇಳುತ್ತಾಳೆ.

ಋತು, ಮಾಸ, ದಿಕ್ಕು, ಕಾಮನಬಿಲ್ಲಿನ ಬಣ್ಣ, ಗ್ರಹ,ವಾರ, ತಿಂಗಳು,ಖಂಡಗಳು, ಜ್ಞಾನಪೀಠ ಪುರಸ್ಕೃತರ ಹೆಸರು, ಕನ್ನಡದ ಸ್ವರಗಳು, ಇಂಗ್ಲಿಷ್ ಸ್ವರಗಳು, ಕನ್ನಡದ ಮೂಲಾಕ್ಷರ, 25 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಉತ್ತರ ನೀಡುತ್ತಾಳೆ, ಭಾರತದ ಪ್ರಧಾನಿ, 9 ಸ್ವಾತಂತ್ರ್ಯ ಹೋರಾಟಗಾರ ಭಾವಚಿತ್ರ ಗುರುತಿಸಿ ಹೆಸರು ಹೇಳುತ್ತಾಳೆ. ಜೊತೆಗೆ ಪ್ರಾಣಿಗಳನ್ನು ಗುರುತಿಸೋದು, ಒಂದರಿಂದ ಹತ್ತು ಅಂಕಿಗಳನ್ನು ಕನ್ನಡ, ತೆಲುಗು, ಹಿಂದಿಯಲ್ಲಿ ಚೂರು ಕೂಡ ತಪ್ಪದೇ ಹೇಳುತ್ತಾಳೆ. ಇಷ್ಟೆ ಯಾಕೆ ಒಂದರಿಂದ ಇಪ್ಪತ್ತರವರೆಗೆ ಇಂಗ್ಲೀಷ್ ಅಂಕಿಗಳು, ವಚನ, ಶ್ಲೋಕಗಳನ್ನು ಹೇಳುವ ಮೂಲಕ ನೋಡುಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ್ದಾಳೆ.

ಇಂಡಿಯ ಬುಕ್ ಆಪ್ ರೆಕಾರ್ಡ್ ತಂಡದಿಂದ ಮೆಚ್ಚುಗೆ:
ಸಮನ್ವಿತಾ ಈ ಸಾಧನೆ ಈಗ ಇಂಡಿಯಾ ಬುಕ್ ಆಪ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಜೊತೆಗೆ ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್ ಪ್ರಶಸ್ತಿ ಪಡೆದು ತಾನು ಎಲ್ಲರಂತಲ್ಲ ಸ್ವಲ್ಪ ವಿಭಿನ್ನ ಎನ್ನುವುದನ್ನು ಸಾಧಿಸಿ ತೋರಿಸಿದ್ದಾಳೆ.

ಇಷ್ಟು ಚಿಕ್ಕ ವಯಸ್ಸಲ್ಲಿ ಇಂತಹ ಸಾಧನೆ ಮಾಡೋದಕ್ಕೆ ಖಂಡಿತ ಸಾಧ್ಯವಿಲ್ಲ.ಜ್ಞಾಪಕ ಶಕ್ತಿ ಎಷ್ಟೇ ಇದ್ದರೂ ಅದಕ್ಕೆ ಮಾರ್ಗದರ್ಶಕರೂ ಬೇಕೇ ಬೇಕು.ಇಲ್ಲಿ ಈ ಪಾಪುಗೆ ತಂದೆ ತಾಯಿಯೇ ಮೊದಲ ಗುರುಗಳು. ಮನೆಯೇ ಮೊದಲ ಪಾಠಶಾಲೆ. ಸಮನ್ವಿತಾಳ ತಂದೆ ವೀರೇಶ್ ಕರಕಟ್ಟಿ ಹಾಗೂ ತಾಯಿ ಅಶ್ವಿನಿ ಕರಕಟ್ಟಿ ಪರಿಶ್ರಮವೇ ಇದಕ್ಕೆ ಕಾರಣ. ಮಗುವಿಗೆ ಯಾವುದೇ ಒತ್ತಡವಿಲ್ಲದೆ ಅದರ ಜೊತೆ ಆಟಾಡುತ್ತಾ ನಲಿಯುತ್ತಾ ಸಂತಸ, ಸಂಭ್ರದಿಂದ ಹೇಳಿಕೊಟ್ಟ ಕಲಿಕೆ ಇಂದು ಈ ಸಾಧನೆಗೆ ಕಾರಣವಾಗಿದೆ.

ಮಗಳು ಸಮನ್ವಿತಾಳಿಗೆ ಒತ್ತಾಯ, ಒತ್ತಡ ಹೇರಿ ಏನನ್ನೂ ಕಲಿಸಿಲ್ಲ, ಅವಳ‌ ಜೊತೆ ‌ಮಗುವಾಗಿ ಆಟ ಆಡುತ್ತಾ ಕುಣಿಯುತ್ತಾ ನಲಿಯುತ್ತಾ, ಪುಸ್ತಕದಲ್ಲಿರುವ ವಿಷಯವನ್ನು ಸುಲಭವಾಗಿ ಕಲಿಸುತ್ತಾ ಬಂದಿದ್ದೇವೆ. ಅದನ್ನು ಅವಳು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಮರಳಿ ಉತ್ತರ ಕೊಡುತ್ತಿದ್ದಳು. ಅದನ್ನು ‌ಗಮನಿಸಿ ಮತ್ತಷ್ಟು ಸಾಮಾನ್ಯ ಜ್ಞಾನ ನೀಡುವ ಪ್ರಯತ್ನ ಮಾಡಿದೆವು. ನಮ್ಮ ಮಗಳ ಈ ಸಾಮರ್ಥ್ಯ ನಮಗೆ ಬಹಳ‌ ಖುಷಿ ಅಭಿಮಾನ ತಂದಿದೆ. ಮುಂದೆ ಅವಳಿಚ್ಚೆಯಂತೆ ಆಕೆ ಭವಿಷ್ಯದಲ್ಲಿ ಉತ್ತಮ ಮಾರ್ಗ ಕಂಡುಕೊಳ್ಳುತ್ತಾಳೆ. ದೊಡ್ಡ ವ್ಯಕ್ತಿಯಾಗಿ ಬೆಳೆಯಲಿ ಎಂದು ಸಮನ್ವಿತಾಳ ತಾಯಿ ಅಶ್ವಿನಿ ಹೇಳಿದ್ದಾರೆ.

ಜ್ಞಾಪಕ ಶಕ್ತಿ ಆಗಾಧವಾಗಿದೆ ಎಂದು ಮನಗಂಡು ಆಕೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಅದನ್ನು ವಿಡಿಯೋ ಮಾಡುತ್ತಾ ಸಂಗ್ರಹ ಮಾಡಿಕೊಂಡು ಇಂಡಿಯಾ ಬುಕ್ ಆಪ್ ರಿಕಾರ್ಡ್ ಗೆ ಆನ್ ಲೈನ್ ಅರ್ಜಿ ಸಲ್ಲಿಸಿದೆವು. ಮಾರ್ಚ್ 19 ಕ್ಕೆ ಆಕೆಯದ್ದು ಇಂಡಿಯಾ ಬುಕ್ ಆಪ್ ರಿಕಾರ್ಡ್ ದಾಖಲಾಗಿದ್ದು, ಅನೌನ್ಸ್ ಆಗಿದೆ. ಜೊತೆಗೆ ಮಗಳ ಹೆಸರನ್ನು ಗೂಗಲ್ ನಲ್ಲಿ ಟೈಪ್ ಮಾಡಿದರೆ ಎಲ್ಲ ಡಿಟೇಲ್ ಸಿಗುತ್ತದೆ. ಮಗಳ ಪ್ರತಿಭೆ ಗೂಗಲ್ ಗುರುತಿಸಿರೋದು ಮಗಳ ಪ್ರತಿಭೆಗೆ ಸಿಕ್ಕ ಗೌರವ ಕಂಡು ಸಂತಸವಾಗಿದೆ ಎಂದು ಸಮನ್ವಿತಾಳ ತಂದೆ ವೀರೇಶ್ ಕರಕಟ್ಟಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಮನ್ವಿತಾ ಚಿಕ್ಕ ವಯಸ್ಸಲ್ಲೇ ತನ್ನ ಪ್ರತಿಭೆ ಅನಾವರಣ ಮಾಡಿದ್ದಾಳೆ. ಈ ಮುದ್ದಾದ ಬಾಲಕಿಗೆ ಇದೇ ರೀತಿ ಪ್ರೋತ್ಸಾಹ ಮುಂದುವರೆಯುತ್ತಾ ಹೋದರೆ ಮುಂದೊಂದು ದಿನ ಈ ಬಾಲಕಿ ಓರ್ವ ಗಣ್ಯ ವ್ಯಕ್ತಿ ದೊಡ್ಡ ಅಧಿಕಾರಿಯಾಗೋದರಲ್ಲಿ ಸಂಶವಯೇ ಇಲ್ಲ.


Spread the love

About Laxminews 24x7

Check Also

ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

Spread the love ಬೆನಕಟ್ಟಿ: ಗ್ರಾಮಕ್ಕೆ ಆಗಮಿಸಿದ ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಬಿಜೆಪಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ