Breaking News
Home / ರಾಜ್ಯ / ರೈತರ ಪ್ರತಿಭಟನೆಯಿಂದ ದಿಲ್ಲಿ ನಿವಾಸಿಗಳಿಗೆ ಭಾರೀ ತೊಂದರೆಯಾಗಿದೆ: ಕೇಂದ್ರ ಸರಕಾರ

ರೈತರ ಪ್ರತಿಭಟನೆಯಿಂದ ದಿಲ್ಲಿ ನಿವಾಸಿಗಳಿಗೆ ಭಾರೀ ತೊಂದರೆಯಾಗಿದೆ: ಕೇಂದ್ರ ಸರಕಾರ

Spread the love

ಹೊಸದಿಲ್ಲಿ, ಫೆ.2: ದಿಲ್ಲಿ ಗಡಿಭಾಗದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದ ದಿಲ್ಲಿ ಹಾಗೂ ನೆರೆಯ ರಾಜ್ಯಗಳ ನಿವಾಸಿಗಳಿಗೆ ಭಾರೀ ತೊಂದರೆಯಾಗಿದೆ ಎಂದು ಕೇಂದ್ರ ಸರಕಾರ ಬುಧವಾರ ಸಂಸತ್ತಿನಲ್ಲಿ ಹೇಳಿದೆ.

ದಿಲ್ಲಿ ಗಡಿಭಾಗದಲ್ಲಿ ಬ್ಯಾರಿಕೇಡ್ ನಿರ್ಮಿಸಿರುವ ಬಗ್ಗೆ ಶಿವಸೇನೆಯ ಸದಸ್ಯ ಅನಿಲ್ ದೇಸಾಯಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಇಲಾಖೆಯ ಸಹಾಯಕ ಸಚಿವ ಜಿ ಕಿಶನ್ ರೆಡ್ಡಿ ‘ ರೈತರ ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ರಾಜಧಾನಿಯ ಘಾಝಿಪುರ, ಚಿಲ್ಲ, ಟಿಕ್ರಿ ಮತ್ತು ಸಿಂಘು ಗಡಿಯಲ್ಲಿ ಸಂಚಾರಕ್ಕೆ ತಡೆಯಾಗಿದ್ದು ದಿಲ್ಲಿ ಹಾಗೂ ನೆರೆಯ ರಾಜ್ಯಗಳ ರೈತರಿಗೆ ಭಾರೀ ತೊಂದರೆಯಾಗಿದೆ. ಯಾವುದೇ ಪ್ರತಿಭಟನೆಯಲ್ಲೂ ಜನರಿಗೆ ಮತ್ತು ಸರಕಾರಕ್ಕೆ ಆರ್ಥಿಕ ನಷ್ಟವಾಗುತ್ತದೆ ‘ ಎಂದು ಹೇಳಿದರು. ಕಳೆದ ವಾರ ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರದ ಬಳಿಕ ದಿಲ್ಲಿಯ ಗಡಿಭಾಗದಲ್ಲಿ ಬ್ಯಾರಿಕೇಡ್, ಮುಳ್ಳು ತಂತಿ, ರಸ್ತೆಯಲ್ಲಿ ಮೊಳೆ ನೆಡುವುದು ಹಾಗೂ ಕಂದಕ ತೋಡುವ ಮೂಲಕ ರೈತರು ಮತ್ತೊಮ್ಮೆ ಮುನ್ನುಗ್ಗುವುದನ್ನು ತಡೆಯಲು ಪೊಲೀಸರ ಕ್ರಮ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.

ಜನವರಿ 26ರಂದು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರಿಗೆ ಅಶ್ರುವಾಯು ಬಳಕೆ ಹಾಗೂ ಲಾಠಿಚಾರ್ಜ್ ನಡೆಸದೆ ಅನ್ಯಮಾರ್ಗವಿರಲಿಲ್ಲ. ಟ್ರಾಕ್ಟರ್ ಹಾಗೂ ಇತರ ವಾಹನಗಳಲ್ಲಿ ಮುನ್ನುಗ್ಗಿ ಬಂದ ಪ್ರತಿಭಟನಾಕಾರರು ಪೊಲೀಸರ ಮೇಲೇರಿ ಹೋಗಿದ್ದಾರೆ. ದಾಂಧಲೆ, ಸಾರ್ವಜನಿಕ ಸೊತ್ತುಗಳಿಗೆ ಹಾನಿ ಯಾಗುವುದನ್ನು ತಪ್ಪಿಸಲು ಲಾಠಿಚಾರ್ಜ್ ಮತ್ತು ಅಶ್ರುವಾಯು ಸಿಡಿಸದೆ ಅನ್ಯಮಾರ್ಗವಿರಲಿಲ್ಲ ಎಂದು ಸಚಿವರು ಹೇಳಿದ್ದಾರೆ.

ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ರೈತರು, ಪ್ರತಿಭಟನಾಕಾರರು ಸುರಕ್ಷಿತ ಅಂತರ ನಿಯಮವನ್ನು ಪಾಲಿಸಿಲ್ಲ ಮತ್ತು ಮಾಸ್ಕ್ ಕೂಡಾ ಧರಿಸಿರಲಿಲ್ಲ. ಆದ್ದರಿಂದ ಅಶ್ರುವಾಯು, ಜಲಫಿರಂಗಿ ಮತ್ತು ಲಾಠಿಚಾರ್ಜ್ ನಡೆಸಬೇಕಾಯಿತು ಎಂದವರು ಸದನದಲ್ಲಿ ಹೇಳಿದರು.

ಈ ಮಧ್ಯೆ, ಭಾರೀ ಭದ್ರತಾ ವ್ಯವಸ್ಥೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ದಿಲ್ಲಿ ಪೊಲೀಸ್ ಆಯುಕ್ತ ಎಸ್‌ಎನ್ ಶ್ರೀವಾಸ್ತವ ‘ಜನವರಿ 26ರಂದು ಟ್ರಾಕ್ಟರ್‌ಗಳನ್ನು ಬಳಸಿ ಪೊಲೀಸರ ಮೇಲೆ ದಾಳಿಯಾದಾಗ, ಬ್ಯಾರಿಕೇಡ್‌ಗಳನ್ನು ಧ್ವಂಸಗೊಳಿಸಿದಾಗ ಯಾರೂ ಪ್ರಶ್ನಿಸಿಲ್ಲ. ಈಗ ನಾವು ಬ್ಯಾರಿಕೇಡ್‌ಗಳನ್ನು ಮತ್ತೆ ಧ್ವಂಸಮಾಡಬಾರದೆಂದು ಬಲಪಡಿಸಿದ್ದೇವೆ. ಅದರಲ್ಲಿ ಏನು ವಿಶೇಷವಿದೆ? ಎಂದು ಮರುಪ್ರಶ್ನಿಸಿದರು.

ಇಂಟರ್‌ನೆಟ್ ಸ್ಥಗಿತದ ಜೊತೆಗೆ ರಸ್ತೆಯ ಪಕ್ಕ ಕಂದಕ ನಿರ್ಮಿಸಿರುವುದು, ಮೊಳೆಯ ಬೇಲಿ ಹಾಕಿರುವುದು ಸರಕಾರಿ ಪ್ರಾಯೋಜಿತ ಆಕ್ರಮಣವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಕ್ರಿಯಿಸಿದೆ.


Spread the love

About Laxminews 24x7

Check Also

ವೈದ್ಯರ ಸಹಾಯ ಪಡೆಯಲು ನಿರಾಕರಣೆ: ಕೇಜ್ರಿವಾಲ್‌ ಸಾವಿಗೆ ಪಿತೂರಿ; ಎಎಪಿ ಆರೋಪ

Spread the love ನವದೆಹಲಿ: ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಇನ್ಸುಲಿನ್‌ ಪಡೆಯಲು ಮತ್ತು ವೈದ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ