Home / ರಾಜ್ಯ / ಇಂದು ಬಾಗಲಕೋಟೆಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಪ್ರವಾಸ; ಗೋ ಬ್ಯಾಕ್ ಅಭಿಯಾನ ಹಿಂಪಡೆದ ರೈತರು!

ಇಂದು ಬಾಗಲಕೋಟೆಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಪ್ರವಾಸ; ಗೋ ಬ್ಯಾಕ್ ಅಭಿಯಾನ ಹಿಂಪಡೆದ ರೈತರು!

Spread the love

ಬಾಗಲಕೋಟೆ (ಜ.17); ಬಿಜೆಪಿ ಚಾಣಕ್ಯ ಎಂದೇ ಹೆಸರುವಾಸಿಯಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬಾಗಲಕೋಟೆ ಜಿಲ್ಲೆಗೆ ಆಗಮಿಸಲಿದ್ದಾರೆ. ನೂತನ ಸಚಿವ ಮುರುಗೇಶ್ ನಿರಾಣಿ ಒಡೆತನದ ಎಂಆರ್​ಎನ್ (ನಿರಾಣಿ) ಉದ್ದಿಮೆ ಸಮೂಹ ಸಂಸ್ಥೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಏಷಿಯಾದಲ್ಲೇ ಅತಿ ದೊಡ್ಡ ಎಥಿನಾಲ್ ಉತ್ಪಾದನೆಗೆ ಸಚಿವ ಮುರುಗೇಶ ನಿರಾಣಿ ಅವರ ನಿರಾಣಿ ಸಮೂಹ ಸಂಸ್ಥೆ ಮುಂದಾಗಿದೆ. ಇದರ ಜೊತೆಗೆ ನಿರಾಣಿ ಅವರ ವಿವಿಧ ಉದ್ಯಮಗಳ ಹಲವು ಘಟಕಗಳ ಉದ್ಘಾಟನೆ ಇಂದು ನಡೆಯಲಿದೆ. ಕೇದಾರನಾಥ ಸಕ್ಕರೆ ಕಾರ್ಖಾನೆ ಬಾಕಿ ಬಿಲ್ ಗೆ ಆಗ್ರಹಿಸಿ ಮುಧೋಳ ರೈತರು ಕೈಗೊಂಡಿದ್ದ ಅಮಿತ್ ಶಾ ಗೋ ಬ್ಯಾಕ್ ಅಭಿಯಾನ ಬೆನ್ನಲ್ಲೇ ಜಿಲ್ಲೆಗೆ ಆಗಮಿಸಿದ ನೂತನ ಸಚಿವ ಮುರುಗೇಶ್ ನಿರಾಣಿ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ರೈತರೊಂದಿಗೆ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದೆ. ಹೀಗಾಗಿ ರೈತರು ಅಭಿಯಾನ ಕೈಬಿಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಬಳಿಯಿರುವ ನಿರಾಣಿ ಸಮೂಹ ಸಂಸ್ಥೆಯ ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಅಮಿತ್ ಶಾ ಕಾರ್ಯಕ್ರಮಕ್ಕೆ ಭರದಿಂದ ಸಿದ್ಧತೆ ನಡೆದಿವೆ. ಈಗಾಗಲೇ ಆರು ಸಕ್ಕರೆ ಕಾರ್ಖಾನೆ ಹೊಂದಿರುವ ನಿರಾಣಿ ಗ್ರೂಪ್ ಪ್ರತಿದಿನ 8.5 ಲಕ್ಷ ಲೀಟರ್ ಎಥಿನಾಲ್ ಉತ್ಪಾದನೆ ಮಾಡುತ್ತಿದೆ. ಇದೀಗ ಅದನ್ನು 26 ಲಕ್ಷ ಲೀಟರ್ ಗೆ ಹೆಚ್ಚಳ ಮಾಡುತ್ತಿದ್ದು, ಈ ಘಟಕಕ್ಕೆ ಅಡಿಗಲ್ಲು ಹಾಕಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಬರುತ್ತಿದ್ದಾರೆ. ಇದರ ಜೊತೆಗೆ ಈಗಾಗಲೇ ಕೆರಕಲಮಟ್ಟಿಯಲ್ಲಿ ಕಳೆದ ಎಂಟತ್ತು ವರ್ಷಗಳಿಂದ ಬಂದ್ ಆಗಿದ್ದ ಸಕ್ಕರೆ ಕಾರ್ಖಾನೆಯನ್ನು ಖರೀದಿ ಮಾಡಿರುವ ನಿರಾಣಿ ಸಮೂಹ ಸಂಸ್ಥೆ, ಕಬ್ಬು ಕ್ರಷಿಂಗ್ ಆರಂಭಿಸಿದ್ದು, ಕಾರ್ಖಾನೆ ಉದ್ಘಾಟನೆಯೂ ನಡೆಯುತ್ತಿದೆ. ಎಥಿನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಇದೀಗ ಇಡೀ ಏಷಿಯಾದಲ್ಲೇ ಅತಿ ಹೆಚ್ಚು ಎಥಿನಾಲ್ ಉತ್ಪಾದನೆಗೆ ಮುಂದಾಗಿರುವುದಕ್ಕೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ನೂತನ ಸಚಿವ ಮುರುಗೇಶ ನಿರಾಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ಕೇದಾರನಾಥ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆಯುವ ಈ ಬೃಹತ್ ಕಾರ್ಯಕ್ರಮವನ್ನು ಅಮಿತ್ ಶಾ ಉದ್ಘಾಟಿಸಲಿದ್ದಾರೆ. ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ರಾಜ್ಯ ಸರ್ಕಾರದ ಹಲವು ಸಚಿವರು ಭಾಗವಹಿಸಲಿದ್ದಾರೆ. ಕೇಂದ್ರ ಗೃಹ ಸಚಿವರ ಕಾರ್ಯಕ್ರಮಕ್ಕೆ ಕಲಬುರ್ಗಿ ವಿಭಾಗದ ಐಜಿಪಿ ಮಹೇಶ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದು, 3 ಎಸ್ಪಿ, 7 ಡಿವೈಎಸ್ಪಿ, 22 ಸಿಪಿಐ, 50 ಪಿಎಸ್​ಐ, 64 ಎಎಸ್ಐ, 775ಕಾನ್ಸ್ಟೇಬಲ್, 97ಹೋಮ್ ಗಾರ್ಡ್, ಸೇರಿದಂತೆ ಒಟ್ಟು 1016 ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ಮುಖ್ಯವೇದಿಕೆಯಲ್ಲಿ ಕೇವಲ 12 ಜನರಿಗೆ ಆಸನ ವ್ಯವಸ್ಥೆ ಇರಲಿದೆ. ಇನ್ನು ಕಾರ್ಯಕ್ರಮಕ್ಕೆ ನಿರಾಣಿ ಅವರ ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವ ರೈತರು, ಕಾರ್ಖಾನೆ ನೌಕರರು, ಬಿಜೆಪಿ ಕಾರ್ಯಕರ್ತರು ಸೇರಿ ಒಂದು ಲಕ್ಷ ಜನರು ಸೇರುವ ನಿರೀಕ್ಷೆಯಲ್ಲಿ ಇದ್ದು, ಅಂದಾಜು 40 ಸಾವಿರ ಜನರ ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕೊರೋನಾ ಹಿನ್ನಲೆಯಲ್ಲಿ ಸಾನಿಟೈಸೆರ್, ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮ ರೂಪಿಸಿಲಾಗಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ