ಬೆಳಗಾವಿ: ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯ ಕೈಗೊಳ್ಳಲು ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತಾರೂಢ ಬಿಜೆಪಿ ಮೇಯರ್, ಉಪಮೇಯರ್‌ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಶುಕ್ರವಾರ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ವಿವಿಧ ಕನ್ನಡ ಸಂಘಟನೆಗಳ ಕಾರ್ಯರ್ತರು ಮನವಿ ಸಲ್ಲಿಸಿದರು.
ಮಹಾನಗರ ಪಾಲಿಕೆ ಪರಿಷತ್ ಸಭೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಬೇಕು ಎಂದು ಒತ್ತಾಯಿಸಿ ಮಾರ್ಚ್ 26ರಿಂದ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿಕೊಂಡು ಬರುತ್ತಿವೆ. ಆದರೆ, ಬಿಜೆಪಿ ಪಕ್ಷದ ಸದಸ್ಯರು ನಿರ್ಣಯ ಕೈಗೊಳ್ಳುವ ಬದಲು ಕನ್ನಡ ದ್ರೋಹದ ಕೆಲಸ ಮಾಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಕನ್ನಡ ವಿರೋಧಿಯಾಗಿ ಆಡಳಿತ ನಡೆಸುತ್ತಿರುವ ಬಿಜೆಪಿ ಸದಸ್ಯರಿಗೆ ಸೂಕ್ತ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲಾಗುವದು ಎಂದು ಮನವಿ ಮೂಲಕ ಎಚ್ಚರಿಸಿದರು.
ಇದಕ್ಕೆ ಸ್ಪಂದಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕನ್ನಡ ನಾಡು,ನುಡಿ ಹಾಗೂ ಗಡಿಯ ಹಿತಾಸಕ್ತಿ ಕಾಪಾಡಲು ತಮ್ಮ ಪಕ್ಷ ಬದ್ಧವಾಗಿದ್ದು ಈ ಸಂಬಂಧ ತಾವು ಬೆಳಗಾವಿ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ( ಶಿವರಾಮೇಗೌಡ ಬಣ) ಅಧ್ಯಕ್ಷ ಎಲ್.ಶಿವರಾಮೇಗೌಡ ತಿಳಿಸಿದ್ದಾರೆ.
ಕರವೇ ಬೆಂಗಳೂರು ನಗರ ಅಧ್ಯಕ್ಷ ಶಂಕರ,ಸಮರ ಸೇನೆಯ ಅಧ್ಯಕ್ಷ ಜಗದೀಶ್ ಗೌಡ್ರ,ರಾಜ್ಯ ಮಾಧ್ಯಮ ಸಂಚಾಲಕ ಜೈ ಕುಮಾರ,ರಾಜ್ಯ ಯುವ ಘಟಕದ ಅಧ್ಯಕ್ಷ ಕನ್ನಡ ಕುಮಾರ,ರಾಜ್ಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ಯಲಹಂಕ ಗುರು ಇತರರಿದ್ದರು.
Laxmi News 24×7