ಬೆಳಗಾವಿ :ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಆರು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಇದೀಗ ಬಯಲಾಗಿದ್ದು, ಮೃತನ ಪತ್ನಿ ಬಂಗಾರಿ ಗಾವಡೆ ಹಾಗೂ ಆಕೆಯ ಪ್ರಿಯಕರ ರಾಮಾ ರಾಣಗೆ ಅವರನ್ನು ಖಡಕಲಾಟ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತನನ್ನು ರಾಘು ಗಾವಡೆ (40) ಎಂದು ಗುರುತಿಸಲಾಗಿದೆ.
ಕೂಲಿ ಕೆಲಸ ಹಾಗೂ ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ ರಾಘು ಗಾವಡೆ ಅವರ ಪತ್ನಿ ಬಂಗಾರಿ, ರಾಘು ಅವರ ಸಹೋದರ ಸಂಬಂಧಿಯಾಗಿರುವ ರಾಮಾ ರಾಣಗೆ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಲು ಇಬ್ಬರೂ ಸಂಚು ರೂಪಿಸಿದ್ದರು.
ಸಂಚಿನಂತೆ ರಾಘುವನ್ನು ಹೊಲಕ್ಕೆ ಕರೆಸಿಕೊಂಡ ಬಂಗಾರಿ, ಪ್ರಿಯಕರ ರಾಮಾ ಜೊತೆ ಸೇರಿ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಬಳಿಕ ಮೃತದೇಹವನ್ನು ಸಾಗಿಸಿ, ಪತಿ ಕುರಿ ಕಾಯಲು ಬೇರೆ ಜಿಲ್ಲೆಗೆ ತೆರಳಿದ್ದಾನೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ನಂಬಿಸಿದ್ದಳು.
ಆರು ತಿಂಗಳ ಕಾಲ ಪತಿ ಕಾಣೆಯಾಗಿದ್ದರೂ ಬಂಗಾರಿ ನೀಡಿದ್ದ ಮಾಹಿತಿಯನ್ನೇ ಕುಟುಂಬಸ್ಥರು ನಂಬಿದ್ದರು. ಆದರೆ ರಾಘು ಸಹೋದರ ಲಗಮಣ್ಣ ಅವರಿಗೆ ಅನುಮಾನ ಮೂಡಿದ್ದು, ಗ್ರಾಮದ ಹಿರಿಯರ ಗಮನಕ್ಕೆ ತಂದಿದ್ದರು.
ಗ್ರಾಮದ ಹಿರಿಯರು ಬಂಗಾರಿಯನ್ನು ವಿಚಾರಿಸಿದಾಗ ಕೊನೆಗೂ ಆಕೆ ಸತ್ಯ ಬಾಯ್ಬಿಟ್ಟಿದ್ದಾಳೆ. ತಕ್ಷಣ ಲಗಮಣ್ಣ ಅವರು ಖಡಕಲಾಟ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಖಡಕಲಾಟ ಪೊಲೀಸರು ಬಂಗಾರಿ ಹಾಗೂ ರಾಮಾ ರಾಣಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Laxmi News 24×7