Breaking News
Home / ರಾಜ್ಯ / ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ,ಗ್ರಾ.ಪಂ. ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆ

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ,ಗ್ರಾ.ಪಂ. ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆ

Spread the love

ಬೆಳಗಾವಿ: ‘ಬಿಜೆಪಿಯ ಮೂವರು ಸಚಿವರಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರಿಂದ ಬಿಜೆಪಿಗೆ ಭಾರಿ ಮುಖಭಂಗವಾಗಿದೆ’ ಎಂದು ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಕ್ಕೋಡಿ, ಅಥಣಿ ಸೇರಿ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 218 ಗ್ರಾಮ ಪಂಚಾಯಿತಿಗಳಿವೆ. ಅವುಗಳಲ್ಲಿ ಕಾಂಗ್ರೆಸ್ ಬೆಂಬಲಿತರು 113 ಪಂಚಾಯಿತಿಯಲ್ಲಿ ಬಹುಮತ ಪಡೆದರೆ, ಬಿಜೆಪಿ ಬೆಂಬಲಿತರು 79ರಲ್ಲಿ ಬಹುಮತ ಗಳಿಸಿದೆ. 26 ಗ್ರಾ.ಪಂ.ಗಳಲ್ಲಿ ಅತಂತ್ರ ಸ್ಥಿತಿ ಇದೆ. ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ 35ರಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ’ ಎಂದು ಮಾಹಿತಿ ನೀಡಿದರು.

‘ನಿಪ್ಪಾಣಿಯಲ್ಲಿ 15, ಚಿಕ್ಕೋಡಿ ಸದಲಗಾದಲ್ಲಿ 18, ಅಥಣಿಯಲ್ಲಿ 11, ಕಾಗವಾಡದಲ್ಲಿ 6, ರಾಯಬಾಗದಲ್ಲಿ 8, ಕುಡಚಿಯಲ್ಲಿ 11, ಹುಕ್ಕೇರಿಯಲ್ಲಿ 10 ಮತ್ತು ಯಮಕನಮರಡಿಯಲ್ಲಿ 35 ಗ್ರಾ.ಪಂ.ಗಳಲ್ಲಿ ಪಕ್ಷದ ಕಾರ್ಯಕರ್ತರು ಅಧಿಕಾರ ಹಿಡಿಯಲಿದ್ದಾರೆ. ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು 3,837 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಕಾಂಗ್ರೆಸ್ ಬೆಂಬಲಿತರು 1,889, ಬಿಜೆಪಿ ಬೆಂಬಲಿತರು 1,738, ತಟಸ್ಥವಾಗಿರುವ 210 ಮಂದಿ ಆಯ್ಕೆಯಾಗಿದ್ದಾರೆ’ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ‘ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚು ಕಡೆಗಳಲ್ಲಿ ಗೆದ್ದಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ 44 ಗ್ರಾ.ಪಂ. 33 ಅನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಖಾನಾಪುರದಲ್ಲಿ 51 ಗ್ರಾ.ಪಂ. ಪೈಕಿ 26ರಲ್ಲಿ ಬಹುಮತ ಪಡೆದುಕೊಂಡಿದ್ದೇವೆ’ ಎಂದರು.

‘ಕಿತ್ತೂರು ಕ್ಷೇತ್ರದಲ್ಲಿ 32 ಪಂಚಾಯಿತಿಗಳ ಪೈಕಿ 17ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದಿದ್ದಾರೆ. ಬೈಲಹೊಂಗಲದ 27ರಲ್ಲಿ 15 ಪಂಚಾಯಿತಿ ಕೈ ಪಾಲಾಗಿವೆ. ಸವದತ್ತಿಯ 28ರಲ್ಲಿ 15 ಪಂಚಾಯಿತಿಗಳು ನಮ್ಮವರ ತೆಕ್ಕೆಗೆ ಸೇರಿವೆ. ಮೂರು ಗ್ರಾಮ ಪಂಚಾಯಿತಿಗಳಲ್ಲಿ ಸಮಾನ ಪೈಪೋಟಿ ಇವೆ. ರಾಮದುರ್ಗದ 33ರಲ್ಲಿ 20 ಪಂಚಾಯಿತಿ ಕೈ ಸೇರಿವೆ. ಗೋಕಾಕ, ಅರಬಾವಿ ಕ್ಷೇತ್ರದ ಯಾವುದೇ ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬಹುಮತ ಪಡೆದಿಲ್ಲ. ಆದರೆ ಅಲ್ಲಿಯೂ ಸರಾಸರಿ ಇಬ್ಬರು, ಮೂವರು ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ’ ಎಂದು ಹೇಳಿದರು.

ಗ್ರಾ.ಪಂ. ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆ

ಬೆಳಗಾವಿ: ಕಾಕತಿ ಜಿಲ್ಲಾ ಪಾಂಚಾಯಿತಿ ವ್ಯಾಪ್ತಿಯ ಬಂಬರಗಿ ಗ್ರಾ.ಪಂ.ಗೆ ನೂತನವಾಗಿ ಆಯ್ಕೆಯಾದ ಸದಸ್ಯರು ಶಾಸಕ ಸತೀಶ ಜಾರಕಿಹೊಳಿ‌ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಭಾರತಿ ಪ್ರಕಾಶ ಕಾಳೆ, ಅಪ್ಪಾಜಿ ನಾಯಕ, ಮಹೇಶ ತೋಪಾಯಿ, ಮಹಾದೇವಿ ಮನಗುತ್ತಕರ, ದತ್ತಾ ಭಂಡುಗೆ, ಬಸವ್ವ ನಾಯಿಕ, ಯಲ್ಲವ್ವ ನಾಯಕ, ಕವಿತಾ ಮಾಳಿ, ಆಕಾಶ ಹಳಿಕರ, ದುರ್ಗವ್ವ ನಾಯಿಕ, ತಮ್ಮಣ್ಣ ಪಾಟೀಲ ಕಾಂಗ್ರೆಸ್ ಸೇರಿದರು.

ಇದೇ ವೇಳೆ, ಬಿಜೆಪಿ ಕಾರ್ಯಕರ್ತರಾದ ಭೀಮಾರತಿ ಕಾಟಬಲಿ, ಬೀಮಾಸತು ಕಾಟಾಬಳಿ, ಮಾಲಾಶ್ರೀ ಪಾಟೀಲ, ಬಾಲಕೃಷ್ಣ ಪಾಟೀಲ, ಸೇವಂತಾ ಕಟಾಬಳಿ ಕಾಂಗ್ರೆಸ್ ಸೇರ್ಪಡೆಯಾದರು.

ಮುಖಂಡರಾದ ಸಿದ್ದು ಸುಣಗಾರ, ರಾಮಣ್ಣ ಗುಳ್ಳಿ, ಸುರೇಶ‌ ನಾಯ್ಕ, ಭೀಮಗೌಡ ಪಾಟೀಲ ಇದ್ದರು.


Spread the love

About Laxminews 24x7

Check Also

ಸರ್ಕಾರಿ ವಾಹನದಲ್ಲಿ ಬಿಜೆಪಿ ಹಣ ಸಾಗಣೆ: ದಿನೇಶ್‌ ಗುಂಡೂರಾವ್

Spread the loveಮೈಸೂರು: ‘ಬಿಜೆಪಿ ನಾಯಕರು ಸರ್ಕಾರಿ ವಾಹನಗಳಲ್ಲಿ ಕೋಟ್ಯಂತರ ರೂಪಾಯಿ ಸಾಗಿಸಿ ಹಂಚುತ್ತಿದ್ದಾರೆ. ಐಟಿ, ಇಡಿ ರಕ್ಷಣೆಯಲ್ಲೇ ಈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ