ಮೈಸೂರು : ನಗರದ ಬನ್ನಿಮಂಟಪದ ಶೆಡ್ನಲ್ಲಿ ಪತ್ತೆಯಾದ ಡ್ರಗ್ಸ್ ಪ್ರಕರಣ ಸಂಬಂಧ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದ್ದಾರೆ.
ಮೈಸೂರಿನಲ್ಲಿಂದು ಮನೆ ಮನೆಗೆ ಪೊಲೀಸ್ ಯೋಜನೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ, ಅವರು, ಮಹಾರಾಷ್ಟ್ರ ಹಾಗೂ ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬನ್ನಿಮಂಟಪ ಸಮೀಪದ ವರ್ತುಲ ರಸ್ತೆಯಲ್ಲಿದ್ದ ಗ್ಯಾರೇಜ್ ರೀತಿಯ ಶೆಡ್ ಮೇಲೆ ಕಳೆದ ಶನಿವಾರ ರಾತ್ರಿ ದಾಳಿ ಮಾಡಲಾಗಿದ್ದು, ಈ ವೇಳೆ ಸುಮಾರು ಕೋಟ್ಯಂತರ ಮೌಲ್ಯದ ಡ್ರಗ್ಸ್ನ ಕಚ್ಚಾವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಬೃಹತ್ ಡ್ರಗ್ಸ್ ಜಾಲ ಪತ್ತೆ ಬಳಿಕ ಕಳೆದ ಮೂರು ದಿನಗಳಿಂದ ಪೊಲೀಸರು ಸತತ ಕಾರ್ಯಾಚರಣೆ ನಡೆಸುತ್ತಿದ್ದು, ಮೂರು ದಿನಗಳಲ್ಲಿ 100 ಜನ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಅವರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಅದರಲ್ಲಿ 60ಕ್ಕೂ ಹೆಚ್ಚು ಜನರ ವಿರುದ್ಧ ಕೇಸ್ ಹಾಕಲಾಗಿದ್ದು 6 ಜನ ಡ್ರಗ್ಸ್ ಮಾರಾಟಗಾರರನ್ನು ಬಂಧನ ಮಾಡಲಾಗಿದೆ ಎಂದು ಸೀಮಾ ಲಾಟ್ಕರ್ ಹೇಳಿದರು.
ಮೈಸೂರಿನಲ್ಲಿ ಪತ್ತೆಯಾದ ಈ ಡ್ರಗ್ಸ್ನ ಮೌಲ್ಯ 381 ಕೋಟಿ ಎಂಬ ಮುಂಬೈ ಪೊಲೀಸರ ಪತ್ರಿಕಾ ಪ್ರಕಟಣೆಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಕಾರ್ಯಾಚರಣೆ ವೇಳೆ 14.8 ಕೆಜಿ ಪೌಡರ್ ಸಿಕ್ಕಿದೆ. ಈ ಸಂದರ್ಭದಲ್ಲಿ ಡಬ್ಬದಲ್ಲಿ ಸಿಕ್ಕ ಡಿಸ್ಲೆರಿ ವಾಟರ್ ಅನ್ನು ಸಹ ಪೌಡರ್ ಅಂತ ತಿಳಿದಿರಬಹುದು. ಮಹಜರ್ ಕಾಪಿ ನಮ್ಮಲ್ಲೂ ಇದೆ. ಮುಂಬೈ ಪೊಲೀಸರ ಮಾಧ್ಯಮ ಪ್ರಕಟಣೆಯ ಬಗ್ಗೆ ಅವರನ್ನೇ ಕೇಳಬೇಕು ಎಂದ ಪೊಲೀಸ್ ಆಯುಕ್ತರು, ಡ್ರಗ್ಸ್ ಪತ್ತೆಯಾದ ಗ್ಯಾರೇಜ್ ಮಾಲೀಕನ ವಿರುದ್ಧ ಹಾಗೂ ಪ್ರಕರಣದ ಬಗ್ಗೆ ನಮ್ಮಲ್ಲೂ ಎಫ್ಐಆರ್ ಆಗಿದೆ. ತನಿಖೆ ಮುಂದುವರೆಸುತ್ತಿದ್ದೇವೆ. ಸಾರ್ವಜನಿಕರು ಸಹ ಪೊಲೀಸರ ಜೊತೆ ಸಹಕರಿಸಬೇಕು ಎಂದರು.
Laxmi News 24×7