Breaking News

ಸಿನಿಮಾ ನಟರ ವಿರುದ್ಧ ಯುಟಿ ಖಾದರ್ ಅಸಮಾಧಾನ

Spread the love

ಬೆಂಗಳೂರು: ಸಿನಿಮಾಗಳಲ್ಲಿ ನಟರು ಸಿಗರೇಟ್  ಹಿಡಿದು ಪೋಸ್ ಕೊಡುವುದನ್ನು ನೋಡಿ ಯುವಜನತೆ ಪ್ರೇರಣೆಗೊಂಡು ದಾರಿ ತಪ್ಪಬಾರದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆಯೋಜಿಸಲಾಗಿದ್ದ ‘ತಂಬಾಕು ಮುಕ್ತ ಯುವ ಅಭಿಯಾನ 4.0’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಯುವಜನತೆಗೆ ಕಿವಿಮಾತು ಹೇಳಿದ ಯು.ಟಿ. ಖಾದರ್, “ಟಿವಿ ಮತ್ತು ಸಿನಿಮಾಗಳಲ್ಲಿ ನಟರು ಕೇವಲ ಸಿಗರೇಟ್ ಹಿಡಿದುಕೊಂಡು ಪೋಸ್ ಕೊಡುತ್ತಾರೆ. ಅದನ್ನು ನೋಡಿ ಯುವಜನತೆ ಹಾಳಾಗಬೇಡಿ. ನಟರು ತೆರೆಯ ಮೇಲೆ ಪೋಸ್ ಕೊಟ್ಟರು ಅಂತ ನೀವು ಸಿಗರೇಟ್ ಸೇದಲು ಶುರು ಮಾಡಿದರೆ, ಮುಂದೆ ನೀವು ಆಸ್ಪತ್ರೆಯ ಐಸಿಯು  ಸೇರಬೇಕಾಗುತ್ತದೆ. ಅಂತಹ ದುಶ್ಚಟಗಳ ವಿಚಾರದಲ್ಲಿ ಸಿನಿಮಾ ನಟರನ್ನು ಎಂದಿಗೂ ಮಾದರಿಯಾಗಿ ತೆಗೆದುಕೊಳ್ಳಬೇಡಿ” ಎಂದು ಎಚ್ಚರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, “ನಾನು ಯಾವುದೇ ನಿರ್ದಿಷ್ಟ ಸಿನಿಮಾ ನಟರ ಬಗ್ಗೆ ಮಾತನಾಡಿಲ್ಲ. ಇಲ್ಲಿನ ಯಾವ ನಟರೂ ಆ ರೀತಿ ಮಾಡುತ್ತಿಲ್ಲ, ಕಾಣಿಸುತ್ತಲೂ ಇಲ್ಲ. ಆದರೆ, ಹಿಂದಿ ಅಥವಾ ಇಂಗ್ಲಿಷ್ ಸಿನಿಮಾಗಳು, ನಾಟಕ ಹಾಗೂ ಇತರ ಮಾಧ್ಯಮಗಳಲ್ಲಿ ಕೆಲವೊಮ್ಮೆ ಸೆಲೆಬ್ರಿಟಿಗಳು ತಂಬಾಕು ಬಳಸುವ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಯುವಜನತೆ ಅದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು, ಅದು ಅಭ್ಯಾಸವಾಗಿ ಆಸ್ಪತ್ರೆ ಸೇರಿದರೆ ಅವರ ಕುಟುಂಬಕ್ಕೆ ಯಾರು ದಿಕ್ಕಾಗುತ್ತಾರೆ? ಸೆಲೆಬ್ರಿಟಿಗಳ ಪ್ರಭಾವದಿಂದ ಯುವಕರು ಹಾಳಾಗಬಾರದು ಎಂಬುದಷ್ಟೇ ನನ್ನ ಕಾಳಜಿ” ಎಂದು ಸ್ಪಷ್ಟಪಡಿಸಿದರು.

ಐಟಿ-ಬಿಟಿ ಕಂಪನಿಗಳಲ್ಲಿ ಸ್ಮೋಕಿಂಗ್ ಝೋನ್‌ಗಳಿಗೆ  ಕಡಿವಾಣ ಹಾಕುವ ಕುರಿತು ಪ್ರತಿಕ್ರಿಯಿಸಿದ ಅವರು, “ಎಷ್ಟೇ ಜಾಗೃತಿ ಮೂಡಿಸಿದರೂ ಕೆಲವರು ಹಳೆಯ ಅಭ್ಯಾಸದಿಂದ ಧೂಮಪಾನ ಮಾಡುತ್ತಿರುತ್ತಾರೆ. ಲಕ್ಷಾಂತರ ಉದ್ಯೋಗಿಗಳು ಇರುವ ಕಡೆ ಸಂಪೂರ್ಣ ನಿಯಂತ್ರಣ ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಪ್ರತ್ಯೇಕ ಝೋನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೂ ಸ್ಮೋಕಿಂಗ್ ಝೋನ್‌ಗಳಿಗೆ ಕಡಿವಾಣ ಹಾಕುವ ಬಗ್ಗೆ ಸಲಹೆ ಬಂದಿದ್ದು, ಈ ಕುರಿತು ಪರಿಶೀಲಿಸಲಾಗುವುದು” ಎಂದರು.

ಇದೇ ವೇಳೆ ನಿಷೇಧವಿದ್ದರೂ ಇ-ಸಿಗರೇಟ್ ಮಾರಾಟವಾಗುತ್ತಿರುವ ಬಗ್ಗೆ ಮಾತನಾಡಿದ ಖಾದರ್, “ಯಾವುದೇ ವಸ್ತುವನ್ನು ಬ್ಯಾನ್ ಮಾಡಿದ ತಕ್ಷಣ ನೂರಕ್ಕೆ ನೂರು ಶೂನ್ಯಕ್ಕೆ ತರುವುದು ಕಷ್ಟ. ಬ್ಯಾನ್ ಎಂದರೆ ಹಂತ ಹಂತವಾಗಿ ಕಡಿವಾಣ ಹಾಕುವುದು. ಒಂದು ವೇಳೆ ಕದ್ದುಮುಚ್ಚಿ ಇ-ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು. ಬಿಎಂಟಿಸಿ ಬಸ್‌ಗಳಲ್ಲಿ ಗುಟ್ಕಾ ಜಾಹೀರಾತು ಪ್ರದರ್ಶನದ ಕುರಿತೂ ಗಮನಹರಿಸುವುದಾಗಿ ಅವರು ತಿಳಿಸಿದರು.


Spread the love

About Laxminews 24x7

Check Also

ಸಿನಿಮಾ ನಟರ ವಿರುದ್ಧ ಯುಟಿ ಖಾದರ್ ಅಸಮಾಧಾನ

Spread the loveಬೆಂಗಳೂರು: ಸಿನಿಮಾಗಳಲ್ಲಿ ನಟರು ಸಿಗರೇಟ್  ಹಿಡಿದು ಪೋಸ್ ಕೊಡುವುದನ್ನು ನೋಡಿ ಯುವಜನತೆ ಪ್ರೇರಣೆಗೊಂಡು ದಾರಿ ತಪ್ಪಬಾರದು ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ