ಗಂಗಾವತಿ (ಕೊಪ್ಪಳ): ಪಾಕಿಸ್ತಾನದ ಜೊತೆ ವಿರುದ್ದ ಯುದ್ದ ಬೇಡ ಎಂದು ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಕೆ ರಾಜಕೀಯದ ಕೊನೆಯ ಘಟ್ಟ ತಲುಪಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಪಾಕಿಸ್ತಾನದಿಂದ `ದಿಲ್ ಸೇ ಪಾಕಿಸ್ತಾನ’ ಪ್ರಶಸ್ತಿಗೆ ಭಾಜನರಾಗಬಹುದು ಎಂದು ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಪಾಕಿಸ್ತಾನದೊಂದಿಗೆ ಯುದ್ಧ ಬೇಡ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರ ಹೇಳಿಕೆಗಳು ಪಾಕಿಸ್ತಾನದ ಮಾಧ್ಯಮಗಳಲ್ಲಿ ಸಿಎಂ ಸಿದ್ದರಾಮಯ್ಯ ಪರ ಸುದ್ದಿ ಪ್ರಸಾರವಾಗಿದ್ದಕ್ಕೆ ಶಾಸಕ ರೆಡ್ಡಿ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡುವ ಮೂಲಕ ಶಾಸಕ ಜನಾರ್ದನ ರೆಡ್ಡಿ ಪ್ರಕ್ರಿಯೆ ನೀಡಿದ್ದಾರೆ. ಯಾವ ಮುಖ್ಯಮಂತ್ರಿಯೂ ಶತ್ರು ರಾಷ್ಟ್ರದ ಹೃದಯ ಗೆದ್ದಿದ್ದಿಲ್ಲ. ಇದೀಗ ಸಿದ್ದರಾಮಯ್ಯನವರು ಪಾಕಿಸ್ತಾನದ ಹೃದಯ ಗೆದ್ದಿದ್ದಾರೆ. ಇದು ಸಿದ್ದರಾಮಯ್ಯನವರ ಓಲೈಕೆ ರಾಜಕೀಯಕ್ಕೆ ಸಂದ ಗೌರವ. ಕರ್ನಾಟಕದ ಮಾನವನ್ನು ಪಾಕಿಸ್ತಾನಕ್ಕೆ ಸಿದ್ದರಾಮಯ್ಯ ಅರ್ಪಿಸಿದ್ದಾರೆ ಎಂದು ರೆಡ್ಡಿ ಟೀಕಿಸಿದ್ದಾರೆ.
ಶತ್ರು ರಾಷ್ಟ್ರವಾದ ಪಾಕ್ ಮಾಧ್ಯಮಗಳ ಹೊಗಳಿಕೆಗೆ ಪಾತ್ರರಾದ ಸಿದ್ದರಾಮಯ್ಯಗೆ ಅಭಿನಂದನೆಗಳು ಎಂದು ಶಾಸಕ ರೆಡ್ಡಿ, ಸಾಮಾಜಿಕ ಜಾಲತಾಣದಲ್ಲಿ ಪಾಕಿಸ್ತಾನದಲ್ಲಿ ಪ್ರಸಾರವಾದ ಸುದ್ದಿಯ ಪೋಸ್ಟ್ ಹಾಕಿ, ಶಾಸಕ ರೆಡ್ಡಿ ಹರಿಹಾಯ್ದಿದ್ದಾರೆ.