ಬೆಂಗಳೂರು: ನಾನೇ ಸಿಎಂ ಆಗಿರುತ್ತೇನೆ ಅಂತ ಸಿದ್ದರಾಮಯ್ಯ ಅವರು ಖಡಕ್ಕಾದ ಮಾತುಗಳಲ್ಲಿ ಪುನರುಚ್ಚರಿಸಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು. ವಿಧಾನಸಭೆಯಲ್ಲಿಂದು ಗ್ಯಾರಂಟಿ ಜಾರಿ ಸಮಿತಿಗಳ ಸಂಬಂಧ ಸ್ಪಷ್ಟನೆ ಕೊಡುವಾಗ ಸಿಎಂ ಈ ಮಾತು ಹೇಳಿದರು.
ನಾವು ಮುಂದಿನ ಬಾರಿಯೂ ಗೆದ್ದು ಬರುತ್ತೇವೆ. ಬಿಜೆಪಿಯವರು ಗೆಲ್ಲಲ್ಲ. ನಾವೇ ನೂರಕ್ಕೆ ನೂರು ಮತ್ತೆ ಗೆದ್ದು ಬರುತ್ತೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಆರ್.ಅಶೋಕ್, ನೀವು ಮೊದಲ ಸಲ ಸಿಎಂ ಆಗಿದ್ದಾಗ ಏ.. ಅಶೋಕ ಬರೆದುಕೊಳ್ಳಪ್ಪ, ನಾನೇ ಪರ್ಮನೆಂಟು ಅಂದಿದ್ರಿ. ಆದರೆ ಹಾಗಂದವರು ಕಾಣೆಯಾಗಿ ಹೋದ್ರಿ, ಕಾಣದಂತೆ ಮಾಯವಾದನೋ ನಮ್ಮ ಶಿವಾ.. ಅಂತ. ಈಗ ಮತ್ತೆ ನಾನೇ ಬರ್ತೀನಿ ಅಂತಿದ್ದೀರಿ. ಹಾಗೆ ಹೇಳಿದ ಯಾರೂ ಸಿಎಂ ಸ್ಥಾನದಲ್ಲಿ ಉಳೀಲಿಲ್ಲ ಸರ್ ಎಂದು ಕಾಲೆಳೆದರು.
ಸಿದ್ದರಾಮಯ್ಯ ಐದೂ ವರ್ಷ ಪೂರೈಸಲಿ ಅಂತಲೇ ನಾವು ಬಯಸ್ತೇವೆ. ಐದು ವರ್ಷ ಇವರ ಸರ್ಕಾರ ಇದ್ದರೆ, ಅದೇ ಪುಣ್ಯ ಅಂತ ಅಶೋಕ್ ಟಾಂಗ್ ಕೊಟ್ರು. ಆಗ, ಈ ಐದು ವರ್ಷ ಅಲ್ಲರೀ, ಮತ್ತೆ ಮುಂದಿನ ಐದು ವರ್ಷವೂ ನಾವೇ ಬರ್ತೇವೆ ಅಂತ ಸಿದ್ದರಾಮಯ್ಯ ಟಕ್ಕರ್ ಕೊಟ್ರು.
ಸಿಎಂ ಆಗಿ ನೀವೇ ಇರ್ತೀರಾ? ಅಂತ ಈ ವೇಳೆ ಬಿಜೆಪಿಯ ಸುನೀಲ್ ಕುಮಾರ್ ಕೇಳಿದ ಪ್ರಶ್ನೆಗೆ, ಹೌದು ನಾನೇ ಇರ್ತೀನಿ ಅಂತ ಸಿದ್ದರಾಮಯ್ಯ ಕೌಂಟರ್ ಕೊಟ್ರು. ಇದು ವಿಧಾನಸಭೆಯಲ್ಲಿ ನಡೆದ ಆಸಕ್ತಿಕರ ಪ್ರಸಂಗವಾದರೂ ಸಿದ್ದರಾಮಯ್ಯ ಇನ್ಯಾರಿಗೋ ಸಂದೇಶ ಕೊಟ್ಟಂತಿತ್ತು.