ಬೆಂಗಳೂರು, ಮಾರ್ಚ್ 10: ಕುಂಭಮೇಳ (Kumbh Mela) ಪ್ರವಾಸ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ರಾವ್ ಬಂಧಿತ ಆರೋಪಿ.
ಪಾಂಚಜನ್ಯ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ನಿಂದ ಅಯೋಧ್ಯೆ, ಕಾಶಿ, ಪ್ರಯಾಗ್ರಾಜ್ (Prayagraj), ವಾರಣಾಸಿ ಸೇರಿಂದತೆ ವಿವಿಧ ತೀರ್ಥ ಕ್ಷೇತ್ರಗಳಿಗೆ 14 ದಿನದ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಫೇಸ್ಬುಕ್ನಲ್ಲಿ ಜಾಹೀರಾತು ನೀಡಿದ್ದಾನೆ.
ಇದನ್ನು ನಂಬಿದ ಯಾತ್ರಾರ್ಥಿಗಳು ರಾಘವೇಂದ್ರ ರಾವ್ನನ್ನು ಸಂಪರ್ಕಿಸಿದ್ದಾರೆ. ಆಗ, ಆರೋಪಿ ರಾಘವೇಂದ್ರ ರಾವ್, ಏಳು ದಿನಗಳ ಪ್ಯಾಕೇಜ್ಗೆ ತಲಾ 49 ಸಾವಿರ ರೂ. ಪಡೆದಿದ್ದಾನೆ. ಹೀಗೆ, ಪ್ರವಾಸದ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ 70 ಲಕ್ಷ ರೂ. ಪಡೆದಿದ್ದಾನೆ. ಬಳಿಕ, ರಾಘವೇಂದ್ರ ರಾವ್ ಎರಡು ರೀತಿ ವಂಚನೆ ಎಸಗಿದ್ದಾನೆ.
ಕೆಲವರಿಗೆ ಟಿಕೆಟ್ ಬುಕ್ ಮಾಡಿ, ನಂತರ ರದ್ದು ಮಾಡಿದ್ದಾನೆ. ರದ್ದು ಮಾಡಿದ ಬಳಿಕ ವಾಪಸ್ ಆದ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ.ಇನ್ನು ಕೆಲವರಿಗೆ, ಪ್ರಯಾಗ್ ರಾಜ್ಗೆ ಯಾತ್ರಿಕರು ತಲುಪಿದ ನಂತರ ಅವರ ರಿಟರ್ನ್ ಟಿಕೆಟ್ ರದ್ದು ಮಾಡಿದ್ದಾನೆ.
ವಾಪಸ್ ಆದ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಟಿಕೆಟ್ ರದ್ದಾದ ಬಳಿಕ ರಾಘವೇಂದ್ರ ರಾವ್ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಈ ಬಗ್ಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ 20 ಕ್ಕೂ ಹೆಚ್ಚು ಜನರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ರಾಘವೇಂದ್ರ ರಾವ್ನನ್ನು ಬಂಧಿಸಿದ್ದಾರೆ.
Laxmi News 24×7