ಬೆಂಗಳೂರು: ಕಬ್ಬಿನ ಉಪ ಉತ್ಪನ್ನಗಳಲ್ಲಿ ಒಂದಾದ ”ಎಥೆನಾಲ್” ಅನ್ನು ಇನ್ನು ಮುಂದೆ ವಿಮಾನಗಳು ಮತ್ತು ಹೆಲಿಕಾಪ್ಟರ್ನಲ್ಲಿ ಬಳಸಲಾಗುವ ಇಂಧನಕ್ಕೂ ಮಿಶ್ರಣ ಮಾಡಲಾಗುತ್ತದೆ ಎಂದು ದಕ್ಷಿಣ ಭಾರತ ಸಕ್ಕರೆ ಕೈಗಾರಿಕೆಗಳ ಸಂಘ (ಸಿಸ್ಮಾ) ದ ಅಧ್ಯಕ್ಷರಾಗಿರುವ ಕೈಗಾರಿಕೋದ್ಯಮಿ ಮುರುಗೇಶ ನಿರಾಣಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ಎಥೆನಾಲ್ ಅನ್ನು ವಿಮಾನ ಮತ್ತು ಹೆಲಿಕಾಪ್ಟರ್ನಲ್ಲಿ ಬಳಸಲಾಗುವ ಇಂಧನಕ್ಕೆ ಶೇ.5 ರಷ್ಟು ಮಿಶ್ರಣ ಮಾಡಲು ಪರವಾನಗಿ ನೀಡಿದೆ. ಈ ಬೆಳವಣಿಗೆಯಿಂದ ಎಥೆನಾಲ್ ದರವು ಹೆಚ್ಚಾಗಿ ಕಬ್ಬು ಬೆಳೆಯುವ ರೈತರಿಗೆ ಅತ್ಯಧಿಕ ಬೆಲೆ ದೊರೆಯಲಿದೆ. 2027 ರ ವೇಳೆಗೆ ವಿಮಾನ, ಹೆಕಾಪ್ಟರ್ಗಳು ಬಳಸುವ ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಮಾಧ್ಯಮಗೋಷ್ಟಿಯಲ್ಲಿ ನಿರಾಣಿ ತಿಳಿಸಿದರು.
ವಿಮಾನ, ಹೆಲಿಕಾಪ್ಟರ್ಗಳಿಗೆ ಸ್ಯಾಫ್ (ಸಸ್ಟನೇಬಲ್ ಏವಿಯೇಶನ್ ಫ್ಯುಯೆಲ್) ನಡಿ ಕಬ್ಬಿನ ಜ್ಯೂಸ್ ಮತ್ತು ಮೆಕ್ಕೆಜೋಳ, ಭತ್ತದಿಂದ ಉಪ ಉತ್ಪನ್ನವಾಗಿ ಉತ್ಪಾದಿಸಲಾಗುವ ಎಥೆನಾಲ್ ಮಿಶ್ರಣ ಮಾಡಬಹುದೆಂದು ಎಂಜನಿಯರ್ಗಳು ತಿಳಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಅನುಮತಿಯೂ ದೊರೆತಿದೆ ಎಂದು ಮಾಹಿತಿ ನೀಡಿದರು. ಇದರಿಂದ ಕಬ್ಬು ಮತ್ತು ಭತ್ತ, ಮೆಕ್ಕೆಜೋಳದ ಧಾನ್ಯಗಳಿಂದ ಬೈ ಪ್ರಾಡಕ್ಟ್ ಆಗಿ ಉತ್ಪಾದನೆ ಮಾಡಲಾಗುವ ಎಥೆನಾಲ್ ಜಲಮಾರ್ಗ, ಭೂಮಾರ್ಗ ಮತ್ತು ವಾಯು ಮಾರ್ಗದ ವಾಹನಗಳಲ್ಲಿ ಬಳಸಿದಂತಾಗುತ್ತದೆ ಎಂದರು.