ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಕೊಚ್ಚಿ ಹೋಗಿರುವುದರಿಂದ ನದಿಗೆ ನೀರು ಬಿಡಲಾಗಿದ್ದು, ಗಂಗಾವತಿ ತಾಲ್ಲೂಕಿನ ಆನೆಗೊಂದಿ ಗ್ರಾಮದ ಬಳಿ ಇರುವ ಕೃಷ್ಣದೇವರಾಯ ಸಮಾಧಿಯ 64 ಸಾಲಿನ ಕಲ್ಲಿನ ಮಂಟಪ ಮುಳುಗುವ ಹಂತ ತಲುಪಿದೆ.
ಕೆಲವು ದಿನಗಳ ಹಿಂದೆ ಜಲಾಶಯಕ್ಕೆ ವ್ಯಾಪಕ ನೀರು ಹರಿದು ಬಂದು ನದಿಗೆ ನೀರು ಹರಿಸಿದ್ದಾಗ ಇದು ಮುಳುಗಡೆಯಾಗಿತ್ತು.
ಕ್ರಸ್ಟ್‌ಗೇಟ್ ಈಗ ಮರಳಿ ಅಳವಡಿಸಬೇಕಾಗಿರುವ ಕಾರಣ ಜಲಾಶಯದ 61 ಟಿಎಂಸಿ ಅಡಿ ನೀರು ಖಾಲಿ ಮಾಡಬೇಕಾಗಿದೆ. ಆದ್ದರಿಂದ ನೀರು ಹರಿಸಲಾಗುತ್ತಿದ್ದು, ಈಗಲೂ ಮಂಟಪ ಮುಳುಗುವ ಸ್ಥಿತಿಗೆ ತಲುಪಿದೆ.
ಸೋಮವಾರ ಬೆಳಿಗ್ಗೆ 6 ಗಂಟೆಯ ಮಾಹಿತಿಯಂತೆ ಜಲಾಶಯದ ಹೊಳಹರಿವು 25,131 ಕ್ಯುಸೆಕ್ ಇದ್ದು, 88,955 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಸಂಚಾರ ನಿರ್ಬಂಧ ವಿಸ್ತರಣೆ: ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ವಿಜಯನಗರ ಜಿಲ್ಲೆಯ ಕಂಪ್ಲಿ ನಡುವೆ ಸಂಪರ್ಕ ಬೆಸೆಯುವ ಕಂಪ್ಲಿ ಸೇತುವೆ ಮೇಲೆ ವಾಹನಗಳ ಹಾಗೂ ಪಾದಚಾರಿಗಳ ಸಂಚಾರ ನಿರ್ಬಂಧ ವಿಸ್ತರಣೆಯಾಗಿದೆ.