Breaking News
Home / ಜಿಲ್ಲೆ / ಬೆಂಗಳೂರು / ಕರ್ನಾಟಕ ಸರ್ಕಾರ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ

ಕರ್ನಾಟಕ ಸರ್ಕಾರ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ

Spread the love

ಬೆಂಗಳೂರು,ನ.3- ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ನಂತರ ಇದೀಗ ಕರ್ನಾಟಕ ಸರ್ಕಾರ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದೆ. ರಾಜ್ಯದಲ್ಲಿ ಮುಸ್ಲಿಂ ಪುರುಷರು ಹಿಂದೂ ಹುಡುಗಿಯರಿಗೆ ಆಮಿಷವೊಡ್ಡಿ ತಮ್ಮ ಜಾತಿಯ ವಿಚಾರವನ್ನು ರಹಸ್ಯವಾಗಿಟ್ಟು ಲವ್ ಜಿಹಾದ್ ಮಾಡಿಕೊಂಡಿರುವ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆ ಕಠಿಣ ಕಾನೂನು ರಚಿಸುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ಇದರಿಂದ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಮುಂದಾಗಿರುವ ಬಿಜೆಪಿ ಆಡಳಿತದ ನಾಲ್ಕನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಲಿದೆ.

ಈ ಹಿಂದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಮುಖ್ಯಮಂತ್ರಿ ಎಂ.ಎಲ್.ಕಟ್ಟರ್, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌವ್ಹಾಣ್ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಘೋಷಣೆ ಮಾಡಿದ್ದರು. ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಸಿ.ಟಿ.ರವಿ ಅವರು, ರಾಜ್ಯದಲ್ಲೂ ಶೀಘ್ರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಅಲಹಾಬಾದ್ ಹೈಕೋರ್ಟ್ ಆದೇಶದಂತೆ, ಕರ್ನಾಟಕ ಸರ್ಕಾರ ಕೂಡ ವಿವಾಹದ ಉದ್ದೇಶಕ್ಕಾಗಿ ಮತಾಂತರವನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲಿದೆ. ಜಿಹಾದಿಗಳು ನಮ್ಮ ಸಹೋದರಿಯರ ಘನತೆಯನ್ನು ಹಾಳು ಮಾಡುವಾಗ ನಾವು ಮನವಾಗಿರುವುದಿಲ್ಲ. ಮತಾಂತರದ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಕಠಿಣ ಮತ್ತು ತ್ವರಿತ ಶಿಕ್ಷೆ ವಿಧಿಸಬೇಕಾಗಿದೆ ಎಂದು ಹೇಳಿದ್ದಾರೆ.

ಪ್ರೀತಿ ಹೆಸರಿನಲ್ಲಿ ಜಿಹಾದ್ ನಡೆಯಬಾರದು. ಇಂತಹ ಪದ್ಧತಿಯನ್ನು ತಡೆಯಲು ಕಾನೂನು ರೂಪಿಸಲಾಗುವುದು ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ. ಲವ್ ಜಿಹಾದ್ ವಿರುದ್ಧ ನಾವು ಪರಿಣಾಮಕಾರಿ ಕಾನೂನನ್ನು ತರುತ್ತೇವೆ. ತಮ್ಮ ನಿಜವಾದ ಹೆಸರು ಮತ್ತು ಗುರುತು ಮರೆಮಾಚಿ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಗೌರವ ಮತ್ತು ಘನತೆಯೊಂದಿಗೆ ಆಟವಾಡುವವರಿಗೆ ಇದು ಎಚ್ಚರಿಕೆ. ಅವರು ತಮ್ಮನ್ನು ತಿದ್ದಿಕೊಳ್ಳದೇ ಹೋದರೆ, ಲವ್ ಜಿಹಾದ್‍ನಲ್ಲಿ ಭಾಗಿಯಾಗಿರುವವರ ಚಿತ್ರಗಳ ಫೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಲು ಸರ್ಕಾರ ಮುಂದಾಗಿದೆ.

ಲವ್ ಜಿಹಾದ್ ಘಟನೆಗಳನ್ನು ತಡೆಯುವಂತೆ ಈ ಸಂಬಂಧ ಹೊಸ ಕಾನೂನಿನ ಅಗತ್ಯವಿದೆಯೇ? ಎಂಬುದನ್ನು ನೋಡಿಕೊಂಡು ಹೊಸ ಕಾಯ್ದೆ ಸಿದ್ಧಪಡಿಸುವಂತೆ ಗೃಹ ಇಲಾಖೆಯ ಅಧಿಕಾರಿಗಳು ಕಾನೂನು ಇಲಾಖೆಗೆ ಸೂಚಿಸಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ವಿವಾಹದ ಏಕೈಕ ಉದ್ದೇಶಕ್ಕಾಗಿ ಮಾಡಲಾಗುವ ಮತಾಂತರ ಮಾನ್ಯವಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ನೂತನ ಕಾಯ್ದೆ ರೂಪಿಸಲಿದೆ. ಬಳಿಕ ಮುಂದಿನ ಚಳಿಗಾಲದ ಅಧಿವೇಶನದ ವೇಳೆ ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ರಾಜ್ಯಪಾಲರ ಅಂಕಿತ ಪಡೆದ ನಂತರ ಕಾಯ್ದೆಯು ಕಾನೂನಿನ ರೂಪ ಪಡೆಯಲಿದೆ.

ರಾಜ್ಯದ ವಿವಿಧ ಭಾಗಗಳಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವ ವಿಚಾರವನ್ನು ಅಧಿಕಾರಿಗಳು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆದು, ಅಗತ್ಯವಿದ್ದರೆ ಕಾಯ್ದೆ ರೂಪಿಸುವಂತೆ ಸಚಿವ ಬಸವರಾಜ್ ಬೊಮ್ಮಯಿ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ದೇಶದ ಹಲವು ರಾಜ್ಯಗಳು ಮತಾಂತರ ವಿರೋಧಿ ಕಾನೂನು ಜÁರಿಗೊಳಿಸುವ ಬಗ್ಗೆ ಆಲೋಚಿಸುತ್ತಿವೆ. ಇದರಿಂದ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಒತ್ತಾಯಪೂರ್ವಕ ಮತ್ತು ಆಮಿಷಕ್ಕೆ ಬಲಿಯಾಗಿ ಮತಾಂತರ ಹೊಂದುವುದನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ಚಿಂತಿಸಲಾಗಿದೆ. ಇದರಿಂದ ನೇರವಾಗಿ ಅಥವಾ ಮೋಸ, ಆಮಿಷ, ಒತ್ತಡದ ಮೂಲಕ ಪರೋಕ್ಷವಾಗಿ ಮತಾಂತರಕ್ಕೆ ಪ್ರೇರೇಪಿಸುವುದಕ್ಕೆ ಕಡಿವಾಣ ಬೀಳಲಿದೆ.

ಮತಾಂತರ ವಿರೋಧಿ ಕಾನೂನಿಗೆ ತೊಡಕು:
ಉತ್ತರ ಪ್ರದೇಶ ಸರ್ಕಾರವು ಜಾರಿಗೊಳಿಸಲು ಚಿಂತಿಸುತ್ತಿರುವ ಮತಾಂತರ ವಿರೋಧಿ ಕಾನೂನು ಪ್ರಕ್ರಿಯೆಯು ಸಾಕಷ್ಟು ತೊಡಕುಗಳನ್ನು ಹೊಂದಿದೆ. ಈ ನಡುವೆಯೇ ದೇಶದ ಹಲವು ರಾಜ್ಯಗಳಲ್ಲಿ ಮತಾಂತರ ಕಾನೂನುಗಳು ಜಾರಿಯಲ್ಲಿವೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಪ್ರಸ್ತುತ ಪರಿಸ್ಥಿತಿಯಲ್ಲಿ ಮತಾಂತರ ವಿರೋಧಿ ಕಾಯ್ದೆಯು ಎಂಟು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಅರುಣಾಚಲ ಪ್ರದೇಶ, ಒಡಿಶಾ, ಮಧ್ಯ ಪ್ರದೇಶ, ಛತ್ತೀಸ್‍ಗಢ, ಗುಜರಾತ್, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್‍ನಲ್ಲಿ ಈ ಕಾನೂನು ಜಾರಿಯಲ್ಲಿದೆ.

ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಮಡಿಕೇರಿ ಸೇರಿದಂತೆ ಮತ್ತಿತರ ಭಾಗಗಳಲ್ಲಿ ಅನ್ಯ ಸಮುದಾಯದವರು ಮತಾಂತರ ನಡೆಸಿ ವಿವಾಹವಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  ಇದನ್ನು ಬಲಪಂಥೀಯ ಸಂಘಟನೆಗಳು ತೀವ್ರವಾಗಿ ವಿರೋಧಿಸಿ ಕೆಲವು ಸಂದರ್ಭಗಳಲ್ಲಿ ಕೋಮು ಸಂಘರ್ಷ ನಡೆದಿರುವ ನಿದರ್ಶನಗಳು ಸಾಕಷ್ಟಿವೆ.

ವಿವಾಹದ ಬಳಿಕ ತಲಾಕ್ ನೀಡಿ ಯುವತಿಯರನ್ನು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು , ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ತರಲು ಮುಂದಾಗಿದೆ ಎಂದು ತಿಳಿದುಬಂದಿದೆ.  ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ , ಕೇವಲ ಮದುವೆ ಉದ್ದೇಶಕ್ಕಾಗಿ ಮತಾಂತರ ಆಗುವುದನ್ನು ಒಪ್ಪಲಾಗದು ಎಂದು ತೀರ್ಪು ನೀಡಿತ್ತು. ತಮ್ಮ ಮದುವೆ ಬಳಿಕ ಮೂರು ತಿಂಗಳ ರಕ್ಷಣೆ ನೀಡುವಂತೆ ಮನವಿ ಮಾಡಿದ ಜೋಡಿಯೊಂದರ ಅರ್ಜಿಗೆ ಮಧ್ಯಪ್ರವೇಶಿಸಲು ನಿರಾಕರಿಸುತ್ತಾ ಕೋರ್ಟ್ ಈ ತೀರ್ಪು ನೀಡಿತ್ತು.
ವಿವಾಹಕ್ಕಾಗಿಯೇ ಮತಾಂತರವಾಗುವುದಕ್ಕೆ ಕಾನೂನಿನ ಮಾನ್ಯತೆ ಇಲ್ಲ ಎಂಬ ತೀರ್ಪು ಕೊಟ್ಟಿದೆ. ಈಗ ಸರ್ಕಾರಕ್ಕೆ ಈ ತೀರ್ಪು ಅಸ್ತ್ರವಾಗಿ ಪರಿಣಮಿಸಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ