Breaking News
Home / ನವದೆಹಲಿ / 125 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮ: ಕಾಂಗ್ರೆಸ್ ಮೊದಲ ಪಟ್ಟಿ ಯುಗಾದಿಗೆ?

125 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮ: ಕಾಂಗ್ರೆಸ್ ಮೊದಲ ಪಟ್ಟಿ ಯುಗಾದಿಗೆ?

Spread the love

ವದೆಹಲಿ: ಕರ್ನಾಟಕ ವಿಧಾನಸಭೆಯ ಮುಂಬರುವ ಚುನಾವಣೆಗೆ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಶುಕ್ರವಾರ ಅಂತಿಮಗೊಳಿಸಿದ್ದು, ಮೊದಲ ಪಟ್ಟಿ ಇದೇ 22ರಂದು ಬಿಡುಗಡೆಯಾಗುವ ಸಾಧ್ಯತೆ ಇದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚಿಸಿ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಾಯಿತು. ಪಕ್ಷದ ಹಾಲಿ ಶಾಸಕರಿರುವ ಕ್ಷೇತ್ರಗಳೂ ಸೇರಿದಂತೆ 125 ಕ್ಷೇತ್ರಗಳಿಗೆ ಒಬ್ಬ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಎಐಸಿಸಿ ನೇಮಿಸಿದ್ದ ಚುನಾವಣಾ ಪರಿಶೀಲನಾ ಸಮಿತಿ ಹೈಕಮಾಂಡ್‌ಗೆ ಕಳುಹಿಸಿತ್ತು. ಈ ಪಟ್ಟಿಯಲ್ಲಿರುವ ಎಲ್ಲರಿಗೂ ಟಿಕೆಟ್‌ ನೀಡಲು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿವೆ.

ಹರಿಹರ (ಆರ್‌.ರಾಮಪ್ಪ), ಕುಂದಗೋಳ (ಕುಸುಮಾ ಶಿವಳ್ಳಿ) ಹಾಗೂ ಲಿಂಗಸುಗೂರು (ಡಿ.ಎಸ್‌.ಹೂಲಗೇರಿ) ಕ್ಷೇತ್ರಗಳಲ್ಲಿ ಹಾಲಿ ಶಾಸಕರನ್ನು ಕಣಕ್ಕೆ ಇಳಿಸಿದರೆ ಗೆಲುವು ಕಷ್ಟ ಎಂದು ಪಕ್ಷದ ಆಂತರಿಕ ಸಮೀಕ್ಷೆಗಳು ತಿಳಿಸಿವೆ. ಹೀಗಾಗಿ, ಈ ಕ್ಷೇತ್ರಗಳ ಕುರಿತು ಸಭೆಯಲ್ಲಿ ತೀರ್ಮಾನಕ್ಕೆ ಬಂದಿಲ್ಲ. ಈ ಕ್ಷೇತ್ರಗಳಲ್ಲಿ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಿ ಮುಂದಿನ ತೀರ್ಮಾನಕ್ಕೆ ಬರಲು ನಿರ್ಧರಿಸಲಾಯಿತು.

ಪಾವಗಡ (ವೆಂಕಟರಮಣಯ್ಯ), ಅಫಜಲಪುರ (ಎಂ.ವೈ.ಪಾಟೀಲ) ಕ್ಷೇತ್ರದ ಶಾಸಕರು ತಮ್ಮ ಪುತ್ರರಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಹೈಕಮಾಂಡ್‌ ಒಪ್ಪಿಗೆ ಸೂಚಿಸಿತು. ಪುಲಕೇಶಿನಗರ (ಅಖಂಡ ಶ್ರೀನಿವಾಸಮೂರ್ತಿ) ಕ್ಷೇತ್ರದ ಕುರಿತು ಪರಿಶೀಲನಾ ಸಮಿತಿ ಶಿಫಾರಸು ಮಾಡಿಲ್ಲ. ಈ ಕ್ಷೇತ್ರದ ಕುರಿತು ಹಿರಿಯ ನಾಯಕರು ಇನ್ನಷ್ಟು ಚರ್ಚೆ ನಡೆಸಿ ಮುಂದಿನ ಹೆಜ್ಜೆ ಇಡುವುದು ಉತ್ತಮ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಇದೇ 20ರಂದು ಬೆಳಗಾವಿಯಲ್ಲಿ ‘ಯುವ ಕ್ರಾಂತಿ ರ‍್ಯಾಲಿ’ ನಡೆಸಲಿದ್ದು, ಅದರ ಬಳಿಕವೇ ಮೊದಲ ಪಟ್ಟಿಯನ್ನು ಪ್ರಕಟಿಸಬೇಕು ಎಂದು ಹಲವು ನಾಯಕರು ಸಲಹೆ ನೀಡಿದರು. ಇದಕ್ಕೆ ಹೈಕಮಾಂಡ್‌ ಪೂರಕವಾಗಿ ಸ್ಪಂದಿಸಿತು ಎಂದು ಹಿರಿಯ ಮುಖಂಡರೊಬ್ಬರು ಹೇಳಿದರು.

ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಕಣಕ್ಕೆ ಇಳಿಯುವುದಿಲ್ಲ ಎಂದು ಈಗಾಗಲೇ ಪ್ರಕಟಿಸಿದ್ದಾರೆ. ಅವರು ಸೂಚಿಸಿದ ಮುಖಂಡರಿಗೆ ಟಿಕೆಟ್‌ ನೀಡಲು ತೀರ್ಮಾನಿಸಲಾಯಿತು. ಜತೆಗೆ, ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ, ಎರಡು ತಿಂಗಳ ಹಿಂದೆ ಕಾಂಗ್ರೆಸ್‌ಗೆ ಸೇರ್ಪಡೆಯಾದ ಮುಳಬಾಗಿಲಿನ ಶಾಸಕ ಎಚ್‌.ನಾಗೇಶ್‌ ಅವರನ್ನು ಮಹದೇವಪುರದಲ್ಲಿ, ವಿಧಾನ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್‌ ಅವರನ್ನು ಬಸವನಗುಡಿ ಕ್ಷೇತ್ರದಲ್ಲಿ ಕಣಕ್ಕಿಳಿಸಲು ನಿರ್ಧರಿಸಲಾಯಿತು.

ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಅವರ ಹೆಸರನ್ನು ರಾಜಾಜಿನಗರ ಕ್ಷೇತ್ರಕ್ಕೆ ಅಂತಿಮಗೊಳಿಸಲು ಸಭೆಯಲ್ಲಿ ಒಲವು ವ್ಯಕ್ತವಾಯಿತು. ಅವರು ಕಾಂಗ್ರೆಸ್‌ ಪಕ್ಷದ ಸದಸ್ಯತ್ವ ಪಡೆದ ಬಳಿಕ ಅಭ್ಯರ್ಥಿತನ ಪ್ರಕಟಿಸುವುದು ಉತ್ತಮ ಎಂದು ಹಲವು ಮುಖಂಡರು ಸಲಹೆ ನೀಡಿದರು. ಚುನಾವಣಾ ಸಮಿತಿ ಸಭೆಯಲ್ಲಿ ರಾಹುಲ್‌ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್‌, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕ ಜಿ.ಪರಮೇಶ್ವರ ಹಾಗೂ ಹಿರಿಯ ಮುಖಂಡ ಎಂ.ವೀರಪ್ಪ ಮೊಯಿಲಿ ಭಾಗವಹಿಸಿದ್ದರು.

ಇನ್ನೂ 70 ಕ್ಷೇತ್ರಗಳಿಗೆ ಎರಡು- ಮೂವರು ಸಂಭವನೀಯ ಅಭ್ಯರ್ಥಿಗಳ ಹೆಸರು ಗುರುತಿಸಿ ಪರಿಶೀಲನಾ ಸಮಿತಿ ಪಟ್ಟಿ ಮಾಡಿದೆ. ಈ ಪಟ್ಟಿಯ ಕುರಿತು ಸಹ ಸಭೆಯಲ್ಲಿ ಚರ್ಚಿಸಲಾಯಿತು. ಈ ಕ್ಷೇತ್ರಗಳ ಆಕಾಂಕ್ಷಿಗಳ ಜತೆಗೆ ರಾಜ್ಯ ನಾಯಕರು ಚರ್ಚೆ ನಡೆಸಿ ಯಾವುದೇ ಗೊಂದಲಕ್ಕೆ ಎಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೈಕಮಾಂಡ್‌ ಸೂಚಿಸಿತು ಎಂದು ಗೊತ್ತಾಗಿದೆ. ಈ ಸಭೆಯ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್‌ನ ಮುಖಂಡರ ಜತೆಗೆ ಮತ್ತೊಂದು ಸುತ್ತಿನ ಸಭೆ ನಡೆಸಿದರು.

ಜೆಡಿಎಸ್‌ ಕಾದು ನೋಡುವ ತಂತ್ರ
ಜಾತ್ಯತೀತ ಜನತಾ ದಳವು (ಜೆಡಿಎಸ್‌) ಈಗಾಗಲೇ 93 ಕ್ಷೇತ್ರಗಳಿಗೆ ಹುರಿಯಾಳುಗಳ ಹೆಸರನ್ನು ಪ್ರಕಟಿಸಿದೆ. ಉಳಿದ ಕ್ಷೇತ್ರಗಳಿಗೆ ಕಾದು ನೋಡುವ ತಂತ್ರ ಅನುಸರಿಸಲು ಪಕ್ಷ ಮುಂದಾಗಿದೆ.

ಹಲವು ಕ್ಷೇತ್ರಗಳಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳ ಕೊರತೆಯನ್ನು ಪಕ್ಷ ಎದುರಿಸುತ್ತಿದೆ. ಕಾಂಗ್ರೆಸ್‌ ಪಟ್ಟಿ ಪ್ರಕಟವಾಗುವುದಕ್ಕೆ ಪಕ್ಷದ ಹಿರಿಯ ಮುಖಂಡರು ಕಾಯುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವು ಕೆಲವು ಕ್ಷೇತ್ರಗಳಿಗೆ 2-3 ಆಕಾಂಕ್ಷಿಗಳ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿದೆ. ಟಿಕೆಟ್‌ ಕೈ ತಪ್ಪಿದವರಲ್ಲಿ ಕೆಲವರು ಪಕ್ಷಾಂತರಕ್ಕೆ ಮುಂದಾಗುತ್ತಾರೆ. ಅಂತವರನ್ನು ಸೆಳೆದುಕೊಂಡು ಟಿಕೆಟ್‌ ನೀಡುವುದು ಜೆಡಿಎಸ್‌ ನಾಯಕರ ಆಲೋಚನೆ ಎಂದು ಮೂಲಗಳು ಹೇಳಿವೆ.

***

ಟಿಕೆಟ್‌ಗಾಗಿ 1,250 ಜನರು ಅರ್ಜಿ ಹಾಕಿದ್ದಾರೆ. ಎಲ್ಲರಿಗೂ ಶಾಸಕರಾಗಬೇಕು ಎಂಬ ಆಸೆ ಇರುತ್ತದೆ. ಎಲ್ಲರನ್ನೂ ಸಮಾಧಾನಪಡಿಸಲು ಸಾಧ್ಯವಿಲ್ಲ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ


Spread the love

About Laxminews 24x7

Check Also

ವೈದ್ಯರ ಸಹಾಯ ಪಡೆಯಲು ನಿರಾಕರಣೆ: ಕೇಜ್ರಿವಾಲ್‌ ಸಾವಿಗೆ ಪಿತೂರಿ; ಎಎಪಿ ಆರೋಪ

Spread the love ನವದೆಹಲಿ: ತಿಹಾರ್‌ ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಇನ್ಸುಲಿನ್‌ ಪಡೆಯಲು ಮತ್ತು ವೈದ್ಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ