Breaking News
Home / ರಾಜಕೀಯ / ಜೈ ಜವಾನ್‌, ಜೈ ಕಿಸಾನ್‌ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರಿಗೊಂದು ಸಲಾಂ

ಜೈ ಜವಾನ್‌, ಜೈ ಕಿಸಾನ್‌ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರಿಗೊಂದು ಸಲಾಂ

Spread the love

ದೇಶದ ಎರಡನೇ ಪ್ರಧಾನಿ, ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೋರಾಟ ನಡೆಸಿದ ಮತ್ತು ಬಡವರ ಏಳಿಗೆಗಾಗಿ ಸರ್ವಥಾ ಶ್ರಮಿಸಿದ, 1965ರ ಇಂಡೋ-ಪಾಕಿಸ್ಥಾನ ಯುದ್ಧದಲ್ಲಿ ಸೇನೆಯನ್ನು ಹುರಿದುಂಬಿಸಿ ಭಾರತ ಗೆಲ್ಲುವಂತೆ ಮಾಡಿದ ಮಹಾನ್‌ ನಾಯಕರಿವರು.

1964ರಿಂದ 1966ರ ವರೆಗೆ ಪ್ರಧಾನಿ ಹುದ್ದೆಯಲ್ಲಿದ್ದ ಇವರು, ದೇಶದ ಏಳಿಗೆಗಾಗಿ ನೀಡಿದ ಕೊಡುಗೆಗಳು ನೂರಾರು. ಇಂದು ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಜನ್ಮದಿನ. ತನ್ನಿಮಿತ್ತವಾಗಿ ಅವರ ಕುರಿತ ವಿಶೇಷ ಸಂಗತಿಗಳು ಇವು…

1904, ಅಕ್ಟೋಬರ್‌ 2
ಇದು ಲಾಲ್‌ ಬಹದ್ದೂರ್‌ ಶಾಸ್ತ್ರಿಯವರು ಜನ್ಮತಾಳಿದ ವರ್ಷ. ಉತ್ತರ ಪ್ರದೇಶದ ಮುಘಲ್‌ಸರಾಯಿಯಲ್ಲಿ ಹುಟ್ಟಿದ ಇವರು, 1920ರಲ್ಲೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಆರಂಭ ದಿಂದಲೂ ಮಹಾತ್ಮಾ ಗಾಂಧೀಜಿಯವರ ಕಟ್ಟಾ ಅನುಯಾಯಿ ಯಾಗಿದ್ದವರು. 1964ರಲ್ಲಿ ನೆಹರೂ ಅವರ ಮರಣಾನಂತರ, ಪ್ರಧಾನಿ ಹುದ್ದೆಗೆ ಏರಿ, ಜೈ ಜವಾನ್‌ ಮತ್ತು ಜೈಕಿಸಾನ್‌ ಎಂಬ ಉದ್ಘೋ ಷದ ಮೂಲಕ ದೇಶಾದ್ಯಂತ ಹೊಸದೊಂದು ಆಂದೋಲನವನ್ನೇ ಸೃಷ್ಟಿಸಿದರು.

ಶಾಸ್ತ್ರಿಯವರ ಬಗ್ಗೆ ಗೊತ್ತಿಲ್ಲದ ಸಂಗತಿಗಳು…
– 1930ರಲ್ಲಿ ಶಾಸ್ತ್ರಿಯವರು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು. ಇದರಿಂದಾಗಿ ಇವರು ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಬೇಕಾಯಿತು.
– 1942ರ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಜತೆಗೆ ಸೇರಿ ಭಾಗಿಯಾದರು.
– 1965ರಲ್ಲಿ ಪಾಕಿಸ್ಥಾನ ವಿರುದ್ಧ ನಡೆದ ಕದನದಲ್ಲಿ ಭಾರತ ಅಪ್ರತಿಮ ಗೆಲುವು ಕಾಣಲು ಕಾರಣರಾದರು.
– ಯುದ್ಧಾನಂತರ ಭಾರತ ಆಹಾರದ ಅಭಾವದಿಂದ ಭಾರೀ ಕಷ್ಟಕ್ಕೀಡಾಗಿತ್ತು. ಆಗ ಪ್ರಧಾನಿಯಾಗಿದ್ದ ಇವರು, ವೇತನವನ್ನು ಪಡೆಯದೇ ಇದನ್ನು ಆಹಾರವಿಲ್ಲದವರಿಗೆ ನೀಡುವ ಕೆಲಸ ಮಾಡಿದರು. ವೇತನ ಬಿಡುವ ಪದ್ಧತಿ ಆರಂಭಿಸಿದವರು ಇವರೇ.
-ಶ್ವೇತಕ್ರಾಂತಿಯ ಜನಕರೂ ಇವರೇ. 1965ರಲ್ಲಿ ಹೆಚ್ಚಿನ ಹಾಲು ಉತ್ಪಾದನೆಗಾಗಿ ಇದನ್ನು ಆರಂಭಿಸಲಾಯಿತು. ಅಲ್ಲದೆ, ಹಾಲು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಬೇಕು, ಈ ಮೂಲಕ ಆತ್ಮನಿರ್ಭರತೆ ಸಾಧಿಸಬೇಕು ಎಂಬುದು ಅವರ ಆಶಯವಾಗಿತ್ತು.

ಕಾರುಕೊಳ್ಳಲೂ ಪ್ರಧಾನಿಯ ಬಳಿ ಹಣವಿರಲಿಲ್ಲ!
ನೆಹರೂ ಸಂಪುಟದಲ್ಲಿ ಒಮ್ಮೆ ರೈಲ್ವೇ ಹಾಗೂ ಇನ್ನೊಮ್ಮೆ ಗೃಹ ಖಾತೆಯ ಸಚಿವರಾಗಿದ್ದ ಶಾಸ್ತ್ರೀಜಿ, ಮುಂದೆ ಪ್ರಧಾನಿಗಳೂ ಆದರು. ಈ ಸಂದರ್ಭದಲ್ಲಿ ನಡೆದ ಪ್ರಸಂಗವಿದು. ಆಗ ಉಳಿದೆಲ್ಲ ರಾಜಕಾರಣಿಗಳ ಬಳಿಯೂ ಎರಡು ಮೂರು ಕಾರುಗಳಿದ್ದವು. ಆದರೆ ಗೃಹ ಸಚಿವ ಅನ್ನಿಸಿಕೊಂಡ ಅನಂತರ ಕೂಡ ಶಾಸ್ತ್ರಿಯವರು ಸ್ವಂತದ ಕಾರು ಖರೀದಿಸಲಿಲ್ಲ. ಆಗ ಕೂಡ ಮಕ್ಕಳನ್ನು ಮಧ್ಯಮ ವರ್ಗದ ಮಕ್ಕಳು ಹೋಗುತ್ತಿದ್ದ ಕುದುರೆ ಬಂಡಿಯಲ್ಲೇ ಶಾಲೆಗೆ ಕಳಿಸುತ್ತಿದ್ದರು.

ಕೇಂದ್ರ ಸಚಿವ ಎಂದು ಕರೆಸಿಕೊಂಡ ಮೇಲಾದರೂ ಓಡಾಡಲು ಒಂದು ಕಾರು ಬೇಡವೆ ಎಂಬುದು ಶಾಸ್ತ್ರಿಯವರ ಹೆಂಡತಿ ಹಾಗೂ ಮಕ್ಕಳ ವಾದವಾಗಿತ್ತು. ಈಗ ಓಡಾಡಲು ಸರಕಾರದ ಕಾರು ಇದೆ. ಇನ್ನೊಂದು ಕಾರಿನ ಅಗತ್ಯವಾದರೂ ಏನು ಎಂದು ಪ್ರಶ್ನಿಸಿ ಶಾಸ್ತ್ರೀಜಿ ಎಲ್ಲರ ಬಾಯಿಮುಚ್ಚಿಸಿದ್ದರು. ಆದರೆ, ವರ್ಷಗಳ ಅನಂತರ ಪ್ರಧಾನಿ ಪಟ್ಟಕ್ಕೇ ಶಾಸ್ತ್ರೀಜಿ ಬಂದು ಕೂತರಲ್ಲ? ಆಗ ಅವರ ಮಕ್ಕಳೆಲ್ಲ ಒಟ್ಟಾಗಿ ಹೋಗಿ “ಸ್ವಂತ ಕಾರು ತಗೋಬೇಕು ಎಂಬ ಆಸೆಯನ್ನು ಈಗಲಾದರೂ ಈಡೇರಿಸಿ’ ಎಂದರು.

ಅದಕ್ಕೆ ಒಪ್ಪಿದ ಶಾಸ್ತ್ರೀಜಿ, ಅವತ್ತೇ ಸಂಜೆ ತಮ್ಮ ಆಪ್ತ ಕಾರ್ಯದರ್ಶಿಯನ್ನು ಕರೆದು ತಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟಿದೆ ಹಾಗೂ ಒಂದು ಹೊಸ ಕಾರಿನ ಬೆಲೆ ಎಷ್ಟಾಗುತ್ತದೆ ಎಂದು ವಿಚಾರಿಸಿ ತಿಳಿಸುವಂತೆ ಆದೇಶಿಸಿದರು.

ಮರುದಿನ ಬೆಳಗ್ಗೆ ಸಂಕೋಚದಿಂದಲೇ ಅವರ ಮುಂದೆ ನಿಂತ ಆಪ್ತಕಾರ್ಯದರ್ಶಿ “ಸರ್‌, ನಿಮ್ಮ ಬ್ಯಾಂಕ್‌ ಬ್ಯಾಲೆನ್ಸ್ ನಾಲ್ಕು ಸಾವಿರ ರೂ.ಗಳಿದೆ ಹಾಗೂ ಹೊಸ ಕಾರಿನ ಬೆಲೆ ಹನ್ನೆರಡು ಸಾವಿರ ರೂ. ಆಗುತ್ತದೆ’ ಎಂದರು!

ಭಾರತದಂಥ ಬೃಹತ್‌ ದೇಶದ ಪ್ರಧಾನಿಯಾಗಿದ್ದ ಸಮಯದಲ್ಲಿ ಕೂಡ ಅವರ ಬಳಿ ಆಪತ್ಕಾಲದ ನಿಧಿ ಎಂಬಂತೆ ಇದ್ದುದು ಕೇವಲ ನಾಲ್ಕು ಸಾವಿರ ರೂ. ಎಂದು ತಿಳಿದು ಶಾಸ್ತ್ರಿಯವರ ಮಕ್ಕಳಿಗೆಲ್ಲ ಶಾಕ್‌ ಆಯಿತು. ಆದರೆ ಶಾಸ್ತ್ರೀಜಿ ಅದೇನೂ ದೊಡ್ಡ ಸಂಗತಿಯಲ್ಲ ಎಂಬಂತೆ ತಮ್ಮ ಬ್ಯಾಂಕ್‌ ಬ್ಯಾಲೆನ್ಸ್‌ನ ವಿವರ ಪಡೆದ ಅನಂತರವೂ ಹಸನ್ಮುಖಿಯಾಗಿಯೇ ಇದ್ದರು. ನಂತರ ಸರಕಾರದಿಂದ ಸಾಲ ಪಡೆದು ಹೊಸ ಕಾರು ಖರೀದಿಸಿ, ಮಕ್ಕಳ ಬಯಕೆಯನ್ನು ಪೂರೈಸಿದರು


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ