Breaking News
Home / ರಾಜಕೀಯ / ಶ್ರಾವಣ ಮಾಸದಲ್ಲಿ ಜನರು ಏಕೆ ನಾನ್ ವೆಜ್ ತಿನ್ನೋದಿಲ್ಲ? ಇದರ ಹಿಂದಿನ ಕಾರಣಗಳೇನು?

ಶ್ರಾವಣ ಮಾಸದಲ್ಲಿ ಜನರು ಏಕೆ ನಾನ್ ವೆಜ್ ತಿನ್ನೋದಿಲ್ಲ? ಇದರ ಹಿಂದಿನ ಕಾರಣಗಳೇನು?

Spread the love

ಹಿಂದೂಗಳು ಶ್ರಾವಣ ಮಾಸವನ್ನು (Shravan Masam) ತುಂಬಾ ಪವಿತ್ರವಾಗಿ ನೋಡುತ್ತಾರೆ. ಹಲವಾರು ವ್ರತ, ಉಪವಾಸ, ಕಟ್ಟು ನಿಟ್ಟಿನ ಪೂಜಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಶ್ರಾವಣ ಮಾಸದ ಈ ತಿಂಗಳಲ್ಲಿ ಭಕ್ತರು (Devotees) ಶಿವನನ್ನು ವಿಶೇಷವಾಗಿ ಪೂಜಿಸುತ್ತಾರೆ.

ಈ ತಿಂಗಳಲ್ಲಿ ಬರುವ ಪ್ರತಿ ಸೋಮವಾರವನ್ನು ದೇವಾಲಯಗಳಲ್ಲಿ (Temples) ಶ್ರಾವಣ ಸೋಮವಾರ ಎಂದು ಭಕ್ತಿ-ಭಾವದಿಂದ ಆಚರಿಸಲಾಗುತ್ತದೆ. ಅಲ್ಲದೇ ಈ ಮಾಸದಿಂದ ಸಾಲು ಸಾಲು ಹಬ್ಬಗಳು (Festivals) ಸಹ ಶುರುವಾಗುತ್ತವೆ. ಕೃಷ್ಣ ಜನ್ಮಾಷ್ಟಮಿ, ರಕ್ಷಾ ಬಂಧನ, ಭೀಮನ ಅಮವಾಸೆ, ನಾಗ ಪಂಚಮಿಯಂತಹ ಅನೇಕ ಪ್ರಮುಖ ಹಿಂದೂ ಹಬ್ಬಗಳು ಶ್ರಾವಣ ಮಾಸದಲ್ಲಿ ಬರುವುದರಿಂದ ಈ ತಿಂಗಳು ಮತ್ತಷ್ಟು ಪವಿತ್ರವಾಗಿದೆ.

ಪೂಜೆ, ವ್ರತ, ಉಪವಾಸದ ಹೊರತಾಗಿ ಈ ಮಾಸದ ಮತ್ತೊಂದು ವಿಶೇಷ ಅಂದರೆ ಹಲವಾರು ಭಕ್ತರು ತಿಂಗಳ ಪೂರ್ತಿ ಮಾಂಸಹಾರವನ್ನು ತ್ಯಜಿಸಿ ಕೇವಲ ತರಕಾರಿ ಊಟವನ್ನುಸೇವಿಸುವುದು. ಹಾಗಾದರೆ ಶ್ರಾವಣದ ಅದೃಷ್ಟದ ತಿಂಗಳಲ್ಲಿ ಮಾಂಸಹಾರವನ್ನು ಏಕೆ ಬಿಡುತ್ತಾರೆ? ಇದರ ಹಿಂದೆ ವಿಶೇಷವಾದ ಕಥೆ ಏನಾದರೂ ಇದೆಯೇ? ವಿಜ್ಞಾನ ಏನು ಹೇಳುತ್ತದೆ? ಸಮಗ್ರ ಮಾಹಿತಿ ಹೀಗಿದೆ. ಮೊದಲಿಗೆ ನಾವಿಲ್ಲಿ ಈ ಪದ್ಧತಿ ಬಗ್ಗೆ ಹಿಂದೂ ಧರ್ಮ ಏನು ಹೇಳುತ್ತದೆ ತಿಳಿಯೋಣ.

ಹಿಂದೂ ಧರ್ಮದ ಸಮರ್ಥನೆ
ಹಿಂದೂ ಧರ್ಮದಲ್ಲಿ ಸಸ್ಯಹಾರಿಗಳು, ಮಾಂಸಾಹಾರಿಗಳು ಇಬ್ಬರೂ ಇದ್ದಾರೆ. ಈ ಮಾಸದಲ್ಲಿ ಮಾಂಸಾಹಾರಿಗಳು ಸಹ ಸಂಪೂರ್ಣವಾಗಿ ಆ ಆಹಾರವನ್ನು ತ್ಯಜಿಸುತ್ತಾರೆ. ಕಾರಣ ಇಷ್ಟೇ ಗೌರವ ಮತ್ತು ನಂಬಿಕೆಯ ಸಮರ್ಪಣೆಗಾಗಿ ಪವಿತ್ರ ಮಾಸ ಶ್ರಾವಣದಲ್ಲಿ ಮಾಂಸವನ್ನು ತಿನ್ನುವುದನ್ನು ಬಿಡಲು ಸಲಹೆ ನೀಡಲಾಗುತ್ತದೆ.

ಆಹಾರ ಪದ್ಧತಿ ವೈಯಕ್ತಿಕ ಆಯ್ಕೆಯಾಗಿದ್ದರೂ ಸಹ ನಮ್ಮ ಪುರಾತನ ಭಗವದ್ಗೀತೆ, ವೇದ, ಪುರಾಣ ಮತ್ತು ಮಹಾಭಾರತದಂತಹ ಹಿಂದೂ ಧರ್ಮಗ್ರಂಥಗಳ ಕೆಲವು ಭಾಗಗಳಲ್ಲಿ ಮಾಂಸ ಸೇವನೆಗೆ ಖಂಡನೆ ಇದೆ. ಉದಾಹರಣೆಗೆ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತನ್ನ ಸಸ್ಯಾಹಾರದ ಆಯ್ಕೆಯನ್ನು ಘೋಷಿಸುವ ಒಂದು ಭಾಗದಲ್ಲಿ “ಒಂದು ಎಲೆ, ಹೂವು, ಹಣ್ಣು ಅಥವಾ ನೀರನ್ನು ನನಗೆ ಪ್ರೀತಿ ಮತ್ತು ಭಕ್ತಿಯಿಂದ ಅರ್ಪಿಸಿದರೆ, ಸಾಕು ನಾನು ಅದನ್ನು ಸ್ವೀಕರಿಸುತ್ತೇನೆ.” ಎಂದು ಹೇಳುವ ಪ್ರಸಂಗವಿದೆ. ಹೀಗಾಗಿ ಪವಿತ್ರ ಮಾಸದಲ್ಲಿ ಹಿಂದೂಗಳು ದೇವರ ಕೃಪೆಗೆ ಪಾತ್ರರಾಗಲು ಮಾಂಸಾಹಾರವನ್ನು ತ್ಯಜಿಸುತ್ತಾರೆ.

ವೈಜ್ಞಾನಿಕ ಕಾರಣಗಳು
ಸೂರ್ಯನ ಬೆಳಕಿನ ಕೊರತೆಯಿಂದಾಗಿ ಮಳೆಗಾಲದಲ್ಲಿ ನಮ್ಮ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ, ಹೀಗಾಗಿ ಈ ಸಮಯದಲ್ಲಿ ಮಾಂಸಾಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಉತ್ತಮ ಎಂಬ ವೈಜ್ಞಾನಿಕ ಕಾರಣ ಕೂಡ ಇದೆ ಮತ್ತು ಶ್ರಾವಣ ಮಾಸದಲ್ಲಿ ಉಪವಾಸ ಮಾಡುವವರು ಜೀರ್ಣಿಸಿಕೊಳ್ಳಲು ಸರಳವಾದ ಲಘು ತಿಂಡಿಗಳನ್ನು ಸೇವಿಸುತ್ತಾರೆ. ಮಳೆಗಾಲದಲ್ಲಿ ನೀರಿನಿಂದ ಹರಡುವ ಹಲವಾರು ರೋಗಗಳು ಇವೆ ಮತ್ತು ಪ್ರಾಣಿಗಳ ಮಾಂಸವು ಕಲುಷಿತವಾಗುವ ಅಪಾಯವಿದೆ. ಪರಿಣಾಮವಾಗಿ, ಮಳೆಗಾಲದಲ್ಲಿ ಮಾಂಸಾಹಾರ ತಪ್ಪಿಸುವುದು ಉತ್ತಮ ಎನ್ನಲಾಗುತ್ತದೆ.

ಇದು ಜಲಚರ ಪ್ರಾಣಿಗಳ ಸಂತಾನಾಭಿವೃದ್ಧಿ ಸಮಯ
ಮಳೆಗಾಲದಲ್ಲಿ ಮೀನು ಮತ್ತು ಇತರ ಜಲಚರಗಳು ಸಂತಾನೋತ್ಪತ್ತಿ ಮಾಡುತ್ತವೆ. ಈ ಸಮಯದಲ್ಲಿ ಜಲಚರ ಪ್ರಾಣಿಗಳನ್ನು ತಿನ್ನುವುದರಿಂದ ಅವುಗಳ ಸಂತಾನೋತ್ಪತ್ತಿ ಕುಂಠಿತವಾಗುತ್ತದೆ. ಮಳೆಗಾಲದಲ್ಲಿ ಜಲಚರಗಳಿಗೆ ಸಂತಾನೋತ್ಪತ್ತಿ ಮಾಡಲು ಯಾವುದೇ ಸಾಕಣೆ ಕೇಂದ್ರಗಳು ಇಲ್ಲದಿದ್ದಾಗ ಜನರು ಮೀನು ಮತ್ತು ಇತರ ರೀತಿಯ ಸಮುದ್ರಾಹಾರಗಳನ್ನು ತಿನ್ನುವುದನ್ನು ತಪ್ಪಿಸಲು ಸಹ ಈ ಪದ್ಧತಿ ಬಂದಿರಬಹುದೆಂದು ಹೇಳಬಹುದು. ಶ್ರಾವಣವನ್ನು ಹಿಂದೂ ಧರ್ಮದಲ್ಲಿ ಪವಿತ್ರ ತಿಂಗಳು ಎಂದು ಮತ್ತು ಹಿಂದೂ ಸಂಸ್ಕೃತಿಯಲ್ಲಿ ಯಾವುದೇ ಜೀವಿಗಳನ್ನು ಕೊಲ್ಲುವುದು ಅನೈತಿಕವೆಂದು ಪರಿಗಣಿಸಲ್ಪಟ್ಟಿರುವುದರಿಂದ ಜನರು ಮಾಂಸಾಹಾರ ಊಟವನ್ನು ಶ್ರಾವಣ ಮಾಸದಲ್ಲಿ ತ್ಯಜಿಸುತ್ತಾರೆ.

ಮಳೆಗಾಲ ಮತ್ತು ಶ್ರಾವಣ ಮಾಸದ ಸಮಯದಲ್ಲಿ ಮಾಂಸಾಹಾರ ಊಟವನ್ನು ಏಕೆ ತಪ್ಪಿಸಬೇಕು ಎಂಬುದಕ್ಕೆ ಇವುಗಳು ಕೆಲವು ಪ್ರಚಲಿತ ಕಾರಣಗಳಾಗಿವೆ. ಆದಾಗ್ಯೂ, ಶ್ರಾವಣದಲ್ಲಿ ಅನೇಕರು ಮಾಂಸಾಹಾರ ತಿನ್ನುತ್ತಾರೆ. ಹೀಗೆ ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುತ್ತಾರೆ.


Spread the love

About Laxminews 24x7

Check Also

ಮೋದಿ ಪ್ರಧಾನಿಯಾದರೆ ಪಿಒಕೆ ಭಾರತಕ್ಕೆ: ಜಗದೀಶ ಶೆಟ್ಟರ

Spread the love ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಮೇಲೆ ಭಾರತಕ್ಕೆ ಕಪ್ಪುಚುಕ್ಕೆಯಾಗಿರುವ ಪಾಕ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ