ಬೆಂಗಳೂರು, ಫೆ.17- ಹುಬ್ಬಳ್ಳಿಯ ಕೆಎಲ್‍ಇ ಶಿಕ್ಷಣ ಸಂಸ್ಥೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿ ಬಿಡುಗಡೆಯಾಗಿರುವ ಪ್ರಕರಣ ಸಂಬಂಧ ಡಿಜಿ, ಐಜಿಪಿ ಯಿಂದ ವರದಿ ಕೇಳಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳನ್ನು ಹೇಳಿಕೆ ಆಧಾರದ ಮೇಲೆ ಮುಚ್ಚಳಿಕೆ ಪತ್ರ ಬರೆಸಿಕೊಂಡು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ನಾನು ರಾಜ್ಯ ಪೊಲೀಸ್ ಮಹಾನಿರ್ದೇಶಕರು, ವಲಯ ಐಜಿಪಿ ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಗೂ ಸೂಚಿಸಿರುವುದಾಗಿ ತಿಳಿಸಿದರು.
ಈ ಪ್ರಕರಣದಲ್ಲಿ ಸರ್ಕಾರ ಎಲ್ಲಿಯೂ ಎಡವಿಲ್ಲ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದಾರೆ. ಕಾಂಗ್ರೆಸ್ಸಿಗರ ದ್ವಂದ್ವ ನೀತಿ ಬಟಾಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ವರದಿ ಬರುವ ಮುನ್ನವೇ ವಿದ್ಯಾರ್ಥಿಗಳನ್ನುಬಿಡುಗಡೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ.
ಪೊಲೀಸರು ಯಾವ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಿದ್ದಾರೆ ಎಂಬುದು ವರದಿ ಬಂದ ಬಳಿಕ ಗೊತ್ತಾಗಲಿದೆ. ಅಲ್ಲಿಯವರೆಗೂ ಕಾಂಗ್ರೆಸ್ ನಾಯಕರು ಸಹನೆಯಿಂದ ವರ್ತಿಸಬೇಕು. ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಬೇಡ ಎಂದು ಬೊಮ್ಮಾಯಿ ಮನವಿ ಮಾಡಿದರು.
ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ನೀವು ಬೀದಿಯಲ್ಲಿ ನಿಂತು ಬಾಯಿಬಡಿದುಕೊಳ್ಳೂತ್ತಿದ್ದೀರಿ. ಅವರ ಹೇಳಿಕೆ ಆಧರಿಸಿ ಬಿಡುಗಡೆ ಮಾಡಿದರೆ ಅದಕ್ಕೂ ಕೊಂಕು ನುಡಿಯುತ್ತೀರಿ. ನಿಮ್ಮದ್ವಂದ್ವ ನಿಲುವನ್ನು ಮೊದಲು ಸರಿಪಡಿಸಿಕೊಳ್ಳಿ.ನಮ್ಮ ನೈತಿಕ ಪಾಠ ಹೇಳುವ ಮೊದಲು ನೀವು ನಿಲುವು ಯಾರ ಪರವಾಗಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ಬೊಮ್ಮಾಯಿ ಆಗ್ರಹಿಸಿದರು.