Breaking News

ಕಾರವಾರ: ಜೂನ್ 1ರಿಂದ ಕರಾವಳಿಯಲ್ಲಿ 61 ದಿನಗಳ ಕಾಲ ಮೀನುಗಾರಿಕೆ ಸಂಪೂರ್ಣ ನಿಷೇಧ

Spread the love

ಕಾರವಾರ: ಮುಂಗಾರು ಮಳೆ ಹಾಗೂ ಮೀನುಗಳ ಸಂತಾನೋತ್ಪತ್ತಿಯ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕದ ಕರಾವಳಿ ಭಾಗದಲ್ಲಿ ಜೂನ್ 1ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ಕಾಲ ಯಾಂತ್ರೀಕೃತ ದೋಣಿಗಳ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮೀನುಗಾರಿಕೆ ಇಲಾಖೆ ಆದೇಶ ಹೊರಡಿಸಿದೆ.

ದೇಶದ ಕರಾವಳಿ ಭಾಗದಲ್ಲಿ ಮಳೆಗಾಲದ ಅವಧಿಯನ್ನು ಮೀನುಗಳ ಸಂತಾನೋತ್ಪತ್ತಿಯ ಪ್ರಮುಖ ಕಾಲವೆಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಜಲಚರಗಳ ರಕ್ಷಣೆಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ನಿರ್ಬಂಧ ಹೇರಲಾಗಿದೆ. ಯಾಂತ್ರೀಕೃತ ದೋಣಿಗಳು ಹಾಗೂ 10 ಹೆಚ್‌ಪಿಗಿಂತ ಅಧಿಕ ಸಾಮರ್ಥ್ಯದ ಇನ್‌ಬೋರ್ಡ್ ಅಥವಾ ಔಟ್‌ಬೋರ್ಟ್ ಯಂತ್ರಗಳನ್ನು ಅಳವಡಿಸಿರುವ ಮೀನುಗಾರಿಕಾ ದೋಣಿಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ದೋಣಿಗಳಲ್ಲಿ ಯಾವುದೇ ರೀತಿಯ ಬಲೆ ಅಥವಾ ಮೀನು ಹಿಡಿಯುವ ಸಾಧನಗಳನ್ನು ಬಳಸಿ ಮೀನುಗಾರಿಕೆ ನಡೆಸುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಈ ನಿಷೇಧಿತ ಅವಧಿಯಲ್ಲಿ 10 ಹೆಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಮೋಟಾರೀಕೃತ ದೋಣಿಗಳು ಹಾಗೂ ಸಾಂಪ್ರದಾಯಿಕ ನಾಡದೋಣಿಗಳಿಗೆ ಮಾತ್ರ ಮೀನುಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ದೋಣಿಗಳ ಮೂಲಕ ತೆರಳುವ ಮೀನುಗಾರರು ಕಡ್ಡಾಯವಾಗಿ ಜೀವ ರಕ್ಷಕ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಮೀನುಗಾರಿಕೆ ನಡೆಸಲು ಮಾತ್ರ ಇಲಾಖೆ ಅನುಮತಿ ನೀಡಿದೆ.

ಮೀನುಗಾರಿಕೆ ಇಲಾಖೆಯ ಈ ಆದೇಶವನ್ನು ಎಲ್ಲಾ ಯಾಂತ್ರೀಕೃತ ದೋಣಿಗಳ ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕಿದೆ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿ ಮೀನುಗಾರಿಕೆ ನಡೆಸಿದರೆ, ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಅಲ್ಲದೆ, ಅಂತಹ ಬೋಟ್‌ಗಳಿಗೆ ಸರ್ಕಾರದಿಂದ ನೀಡಲಾಗುವ ಮಾರಾಟ ಕರರಹಿತ ಡೀಸೆಲ್ ಹಾಗೂ ಇತರ ಯಾವುದೇ ಸಹಾಯ ಸೌಲಭ್ಯಗಳನ್ನು ತಕ್ಷಣವೇ ರದ್ದುಗೊಳಿಸಲಾಗುವುದು ಎಂದು ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ. ಕರಾವಳಿ ಪ್ರದೇಶದ ಸಮಸ್ತ ಮೀನುಗಾರರ ಹಾಗೂ ಮತ್ಸ್ಯ ಸಂಪತ್ತಿನ ಹಿತದೃಷ್ಟಿಯಿಂದ ಹೊರಡಿಸಲಾಗಿರುವ ಈ ಆದೇಶವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸುವಂತೆ ಉತ್ತರ ಕನ್ನಡ ಜಿಲ್ಲಾ ಮೀನುಗಾರಿಕೆ ಜಂಟಿ ನಿರ್ದೇಶಕರು ಕೋರಿದ್ದಾರೆ.


Spread the love

About Laxminews 24x7

Check Also

ಡಿಸಿಎಂಗಳ ಹುದ್ದೆ ಬೇಡವೇ ಬೇಡ – ಕಾಂಗ್ರೆಸ್ ಹೈಕಮಾಂಡ್ ಮುಂದೆ ಡಿಕೆಶಿ, ಸತೀಶ್ ಜಾರಕಿಹೊಳಿ ಪ್ರಸ್ತಾಪ

Spread the loveಬೆಂಗಳೂರು: ಡಿಸಿಎಂಗಳ ಹುದ್ದೆಬೇಡವೇ ಬೇಡ ಎಂದು ಕಾಂಗ್ರೆಸ್  ಹೈಕಮಾಂಡ್ ಮುಂದೆ ಭಾವಿ ಸಿಎಂ ಡಿಕೆ ಶಿವಕುಮಾರ್  ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ