ಹೈದರಾಬಾದ್: ಮದುವೆಯಾದ ಐದು ದಿನದಲ್ಲೇ ಅಪಘಾತದಲ್ಲಿ ವರ ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.
ಹೊಲಗುಂಡ ಮಂಡಲದ ಸಮ್ಮತಗೇರಿ ಗ್ರಾಮದ ಮರೇಶ್ (23) ಮೃತ ನವವಿವಾಹಿತ. ಮೃತ ಮರೇಶ್ ಜೂನ್ 17 ರಂದು ಹೊಲಗುಂಡದ ವಧು ರೇಣುಕಾ ಜೊತೆ ಸರಳವಾಗಿ ವಿವಾಹವಾಗಿದ್ದನು.
ಭಾನುವಾರ ಅಮಾವಾಸ್ಯೆಯ ನಂತರ ಅಂದರೆ ಸೋಮವಾರ ನೂತನ ದಂಪತಿ ಅಮೃತಪುರಂನಲ್ಲಿರುವ ದೇವಸ್ಥಾನಕ್ಕೆ ಹೋಗುತ್ತಿದ್ದರು. ಆದರೆ ಈ ವೇಳೆ ವೇಗವಾಗಿ ಬಂದ ಬೈಕ್ ನವಜೋಡಿ ಇದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮರೇಶ್ ಮತ್ತು ರೇಣುಕಾ ಇಬ್ಬರಿಗೂ ಗಂಂಭೀರವಾಗಿ ಗಾಯಗಳಾಗಿವೆ. ತಕ್ಷಣ ಅವರನ್ನು ಸ್ಥಳದಲ್ಲಿದ್ದವರು ಕರ್ನೂಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮರೇಶ್ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ರೇಣುಕಾ ಸ್ಥಿತಿ ಕೂಡ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮದುವೆಯಾದ ಐದು ದಿನಕ್ಕೆ ಮಗನನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.