Breaking News

ಕರ್ನಾಟಕದಲ್ಲಿ 56,834 ಹುದ್ದೆಗಳ ನೇಮಕಾತಿಗೆ ಶೀಘ್ರವೇ ಗ್ರೀನ್ ಸಿಗ್ನಲ್: ಗೃಹ ಸಚಿವ ಪರಮೇಶ್ವರ

Spread the love

ಕಲಬುರಗಿ: ರಾಜ್ಯದಲ್ಲಿನ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮಹತ್ವದ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿನ ಪೊಲೀಸ್ ಆಯುಕ್ತಾಲಯ ಕಚೇರಿಯಲ್ಲಿ ಕೆಕೆಆರ್‌ಡಿಬಿ  ಅನುದಾನದಡಿ ಖರೀದಿಸಲಾದ ನೂತನ ವಾಹನಗಳ ಹಸ್ತಾಂತರ ಕಾರ್ಯಕ್ರಮ ಹಾಗೂ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್  ಉದ್ಘಾಟನೆಯ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಒಟ್ಟು 56,834 ಖಾಲಿ ಹುದ್ದೆ

ರಾಜ್ಯದಲ್ಲಿ ಒಟ್ಟು 56,834 ಖಾಲಿ ಹುದ್ದೆಗಳಿದ್ದು, ಅವುಗಳ ಭರ್ತಿಗೆ ಈಗಾಗಲೇ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಪ್ರಕ್ರಿಯೆ ವಿಳಂಬವಾಗಲು ಒಳಮೀಸಲಾತಿ ಸಂಬಂಧಿತ ಸಮಸ್ಯೆಗಳು ಕಾರಣವಾಗಿದ್ದರೂ, ಇದೀಗ ಅವುಗಳನ್ನು ಸರ್ಕಾರ ಬಗೆಹರಿಸಿದೆ. ಸಚಿವ ಸಂಪುಟವು ಈಗಾಗಲೇ ಸಾವಿರಾರು ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

ಒಟ್ಟು 947 ಪಿಎಸ್‌ಐಗಳ ನೇಮಕಾತಿ ಪೂರ್ಣ

ಈ ಹುದ್ದೆಗಳಲ್ಲೇ 8 ಸಾವಿರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳು ಹಾಗೂ ಸುಮಾರು 600 ಹೊಸ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದೆ 545 ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಉಂಟಾದ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ ನೇಮಕಾತಿಯನ್ನು ಸ್ಥಗಿತಗೊಳಿಸಿ, ಮರು ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ಇದಲ್ಲದೆ, 402 ಪಿಎಸ್‌ಐಗಳನ್ನು ಈಗಾಗಲೇ ನೇಮಕ ಮಾಡಿ ತರಬೇತಿಗೆ ಕಳುಹಿಸಲಾಗಿದೆ. ಈ ಮೂಲಕ ಒಟ್ಟು 947 ಪಿಎಸ್‌ಐಗಳ ನೇಮಕಾತಿ ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದರು.

ಕೆಕೆಆರ್‌ಡಿಬಿ ಅನುದಾನದಡಿ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್‌ಗಳನ್ನು ಜಾರಿಗೊಳಿಸುವ ಜೊತೆಗೆ ವಿವಿಧ ಪೊಲೀಸ್ ವಾಹನಗಳನ್ನು ಖರೀದಿಸಲಾಗಿದೆ. ಕಳೆದ ಬಾರಿ ಮಂಡಳಿಯಿಂದ 50 ಕೋಟಿ ರೂಪಾಯಿ ಅನುದಾನ ದೊರೆತಿದ್ದು, ಇದೀಗ 100 ಕೋಟಿ ರೂಪಾಯಿ ಅನುದಾನವನ್ನು ಕೇಳಲಾಗಿದೆ ಎಂದು ಹೇಳಿದರು. ಜೊತೆಗೆ, 20 ಕೋಟಿ ರೂಪಾಯಿ ವೆಚ್ಚದಲ್ಲಿ 72 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗಿದ್ದು, 2030ರೊಳಗೆ ರಾಜ್ಯದ ಶೇ.80ರಷ್ಟು ಪೊಲೀಸರಿಗೆ ವಸತಿ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಬೀದರ್‌ನ ಎಟಿಎಂ ದರೋಡೆ ಪ್ರಕರಣ ಕುರಿತು ಮಾತನಾಡಿದ ಅವರು, ಆರೋಪಿಗಳು ವಿದೇಶದಲ್ಲಿ ನೆಲೆಸಿರುವ ಸಾಧ್ಯತೆ ಇರುವ ಮಾಹಿತಿ ದೊರೆತಿದ್ದು, ತನಿಖಾ ತಂಡ ಅವರ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ, ಈ ವರ್ಷದ ಬಜೆಟ್‌ನಲ್ಲಿ 12 ಹೊಸ ಪೊಲೀಸ್ ಠಾಣೆಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಇಲಾಖೆಗೆ ಮಂಜೂರಾದ ಅನುದಾನವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಸೈಬರ್ ಅಪರಾಧ ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಡಿಜಿಪಿ ಹುದ್ದೆಯನ್ನು ಸೃಷ್ಟಿಸಲಾಗಿದೆ. 2024ರಲ್ಲಿ ಸುಮಾರು 24 ಸಾವಿರ ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿದ್ದರೆ, 2025ರಲ್ಲಿ ಅವುಗಳ ಸಂಖ್ಯೆ 14 ಸಾವಿರಕ್ಕೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಬಿ.ಆರ್. ಪಾಟೀಲ್, ಶಾಸಕಿ ಖನೀಜಾ ಫಾತಿಮಾ, ಅಫಜಲಪುರ ಶಾಸಕ ಎಂ.ವೈ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಜಗದೇವ್ ಗುತ್ತೇದಾರ್ ಹಾಗೂ ತಿಪ್ಪಣ್ಣಪ್ಪ ಕಮಕನೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜೊತೆಗೆ, ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯದ್ ಮೊಹಮ್ಮದ್ ಚಿಸ್ತಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಮಹಾನಗರ ಪಾಲಿಕೆಯ ಮೇಯರ್ ವರ್ಷಾ ರಾಜೀವ್ ಜಾನೆ ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಿಕಾ ಪರಮೇಶ್ವರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ