Breaking News

ಗ್ರಾಮ ಸಭೆಗಳು ಪಂಚಾಯತ್ ವ್ಯವಸ್ಥೆಗೆ ಭದ್ರ ಅಡಿಪಾಯ: ಮಾಜಿ ಸಿಎಂ ವೀರಪ್ಪ ಮೊಯ್ಲಿ

Spread the love

ಬೆಂಗಳೂರು: ಗ್ರಾಮ ಸಭೆಗಳು ಪಂಚಾಯತ್ ವ್ಯವಸ್ಥೆಗೆ ಭದ್ರ ಅಡಿಪಾಯವಾಗಿವೆ. ಹಾಗಾಗಿ, ಗ್ರಾಮ ಸಭೆಗಳ ಬಲವರ್ಧನೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಕರ್ನಾಟಕ ಪಂಚಾಯತ್‌ರಾಜ್ ಪರಿಷತ್, ಭಾನುವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘16ನೇ ಹಣಕಾಸು ಆಯೋಗ ಮತ್ತು 5ನೇ ರಾಜ್ಯ ಹಣಕಾಸು ಆಯೋಗಗಳ ವರದಿಗಳ’ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಯಾವುದೇ  ಚುನಾವಣೆಗಳು ನಡೆಯದಿದ್ದರೆ ಅನುದಾನ ಹಂಚಿಕೆಯಾಗಲ್ಲ. ಸ್ಥಳೀಯ ಸಂಸ್ಥೆಗಳಿಗೆ ನಿಗದಿತ  ಸಮಯದಲ್ಲಿ ಚುನಾವಣೆ ನಡೆಯುವಂತಾಗಬೇಕು. ಗಾಂಧಿ ಅವರು ಪಂಚಾಯತ್‌ರಾಜ್ ವ್ಯವಸ್ಥೆಗೆ ವಿಶೇಷವಾಗಿ ಪ್ರಾಮುಖ್ಯತೆ ಕೊಟ್ಟಿದ್ದರು. ಪಂಚಾಯತ್‌ರಾಜ್ ವ್ಯವಸ್ಥೆ ಪ್ರಜಾಪ್ರಭುತ್ವದ ಜೀವಾಳ. ನಮ್ಮ ಅಧಿಕಾರದ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೊಳಿಸಿ ಅಧಿಕಾರ ವಿಕೇಂದ್ರೀಕರಣ ಮಾಡಲಾಗಿತ್ತು.  ರಾಜ್ಯ ಹಣಕಾಸು ಆಯೋಗಗಳ ವರದಿಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬರುವಂತಾಗಲಿ ಎಂದು ಆಶಿಸಿದರು.

ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಆರ್.ಪಾಟೀಲ್ ಮಾತನಾಡಿ, ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ 21 ಕಾರ್ಯಕ್ರಮಗಳನ್ನು ರೂಪಿಸಿದೆ. ಇದರ ಜೊತೆಗೆ ಸರ್ಕಾರ ಸೇರಿ ಇತರ ಇಲಾಖೆಗಳು ಜಾರಿಗೊಳಿಸಿರುವ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರೆ ಗ್ರಾಮಸ್ಥರ ಬಹುತೇಕ ಬೇಡಿಕೆಗಳು ಈಡೇರಿಸಬಹುದು ಎಂದರು.

ಸರ್ಕಾರದ, ಸಂಘ-ಸಂಸ್ಥೆಗಳ ಮತ್ತು ಪಂಚಾಯತ್ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿಯೇ ಆಗಬೇಕು.ಯುಪಿಎ ಸರ್ಕಾರ ರಚಿಸಿದ 14ನೇ ಹಣಕಾಸು ಆಯೋಗ, ಇದೀಗ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದರ ಶಿಫಾರಸ್ಸಿನ ಅನ್ವಯ ಗ್ರಾಮ ಪಂಚಾಯಿತಿಗಳಿಗೆ ಮುಂದಿನ ವರ್ಷದಿಂದ ಜನಸಂಖ್ಯೆಗೆ ಅನುಗುಣವಾಗಿ ವಾರ್ಷಿಕ 488 ರೂ.ತಲಾ ವರಮಾನ ಪಡೆಯಲಿವೆ. ಇದೇರೀತಿ ರಾಜ್ಯ ಹಣಕಾಸು  ಆಯೋಗವು ಹೆಚ್ಚುವರಿ ಹಣಕಾಸು ನೆರವು ನೇರವಾಗಿ ಗ್ರಾಮ ಪಂಚಾಯಿತಿಗೆ ಸಿಗುವಂತೆ ಶಿಫಾರಸು ಮಾಡಬೇಕು ಎಂದು ಸಲಹೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗದ ವರದಿ ಕುರಿತು ವಿವಿಧ ತಜ್ಞರು ವಿಚಾರ ಮಂಡಿಸಿದರು.ಪರಿಷತ್ ಕಾರ್ಯಾಧ್ಯಕ್ಷ ವಿ.ವೈ.ಘೋರ್ಪಡೆ, ಉಪಾಧ್ಯಕ್ಷ ಸೌಭಾಗ್ಯ ಬಸವರಾಜನ್, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಸತೀಶ್, ಕೋಶಾಧಿಕಾರಿ ಡಾ.ಚಿಕ್ಕಕೊಮಾರಿಗೌಡ ಮತ್ತಿತರರಿದ್ದರು.

 


Spread the love

About Laxminews 24x7

Check Also

ಸಂತಾನಹರಣ ಚಿಕಿತ್ಸೆ ವೇಳೆ ಕರುಳು ಕಟ್ – ವೈದ್ಯರ ಯಡವಟ್ಟಿನಿಂದ ಮಹಿಳೆ ಸಾವು: ಪತಿ ಆರೋಪ

Spread the loveಚಿಕ್ಕಬಳ್ಳಾಪುರ: ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಚಿಕಿತ್ಸೆ ವೇಳೆ ಕರುಳು ಕತ್ತರಿಸಿ ವೈದ್ಯರ ಯಡವಟ್ಟು ಮಾಡಿದ್ದಾರೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ