ಬೆಂಗಳೂರು: ಡಬಲ್ ಬಿಲ್, ನಕಲಿ ಬಿಲ್ ಮಾಡುವವರನ್ನು ಬಡಿದು ಹಾಕುವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮಂಗಳವಾರ ನಡೆದ ಸರ್ಕಾರಿ ನೌಕರರೊಂದಿಗಿನ ಸಂವಾದದಲ್ಲಿ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭ್ರಷ್ಟಾಚಾರ ವಿಚಾರದಲ್ಲಿ ನಾನು ರಾಜಿ ಇಲ್ಲ. ಅಧಿಕಾರಿಗಳ ಪ್ರತಿ ಹೆಜ್ಜೆಯನ್ನೂ ಪರಿಶೀಲಿಸುತ್ತೇನೆ. ಪ್ರತಿ ಫಲಾನುಭವಿ ಮಾಹಿತಿ ಇಟ್ಟುಕೊಳ್ಳಬೇಕು. ಅವರು ಅದನ್ನು ಹೇಗೆ ಬಳಸುತ್ತಿದ್ದಾರೆ ಎಂದು ನೋಡಬೇಕು. ನಮ್ಮಲ್ಲಿ ಡಬಲ್ ಬಿಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ಅಂಥವರನ್ನು ಬಡಿದು ಹಾಕುತ್ತೇನೆ. ನಕಲಿ ಬಿಲ್ಗಳಿಗೆ ಅವಕಾಶ ಇಲ್ಲ. ದಾಖಲೆ ತಿದ್ದುವುದಕ್ಕೆ ಕಡಿವಾಣ ಹಾಕಲು ಆಸ್ತಿ ದಾಖಲೆ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದರು.
ತಾಲೂಕು ಅಧಿಕಾರಿಗಳು ತಮ್ಮ ದಿನದ ಕಾರ್ಯಕ್ರಮದ ವಿವರ ಹಿರಿಯ ಅಧಿಕಾರಿಗಳಿಗೆ ನೀಡಬೇಕು. ಸಹಕಾರ, ಕಂದಾಯ ಅಧಿಕಾರಿಗಳಿಗೆ ನ್ಯಾಯ ನೀಡುವ ಅಧಿಕಾರ ಇರುತ್ತದೆ. ನ್ಯಾಯ ಪೀಠದಿಂದ ಅನ್ಯಾಯ ಆಗಬಾರದು. ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಿ. ಅಧಿವೇಶನ ಆದ ಮೇಲೆ ಪ್ರತಿ ತಾಲೂಕಿಗೂ ನಾನು ಭೇಟಿ ನೀಡುತ್ತೇನೆ ಎಂದು ಹೇಳಿದರು.
ಇದೇ ವೇಳೆ, ಖಾಸಗಿ ಶಾಲೆಗಳೂ ಸೇರಿ ಎಲ್ಲಾ ಶಾಲೆಗಳೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ನಮ್ಮನ್ನೂ ಸೇರಿದಂತೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು 5.50 ಲಕ್ಷ ಸರ್ಕಾರಿ ನೌಕರರಿಗೆ ಮಾತ್ರ. ನಾವು ನಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಅವರ ಕಾಲದಿಂದ ಇಲ್ಲಿಯವರೆಗೆ ಎಲ್ಲ ಸಿಎಂಗಳೂ ತಮ್ಮದೇ ರೀತಿಯಲ್ಲಿ, ತಮ್ಮದೇ ಅನುಭವ ಸಿದ್ಧಾಂತದ ಮೇಲೆ ಆಡಳಿತ ಮಾಡಿದ್ದಾರೆ. ಕೆಂಗಲ್ ಹನುಮಂತಯ್ಯ ಅವರು ಜೈಲಿನ ಖೈದಿಗಳಿಂದ ವಿಧಾನಸೌಧ ಕಟ್ಟಿಸಿದರು. ಆಗ ಕೆಲವು ಖೈದಿಗಳು ಹನುಮಂತಯ್ಯ ಅವರ ಮೇಲೆ ಚಪ್ಪಲಿ ಎಸೆದಿದ್ದರು. ವಿಶ್ವೇಶ್ವರಯ್ಯ ಅವರು 1 ರೂಪಾಯಿಗೆ ಕೆಲಸ ಮಾಡುತ್ತಿದ್ದರು ಎಂಬ ಇತಿಹಾಸ ಇದೆ. ನಾನು ಈ ಹಿಂದಿನವರ ಕೆಲಸಗಳನ್ನು ಟೀಕೆ ಮಾಡುವುದಿಲ್ಲ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದು ತಿಳಿಸಿದರು.
Laxmi News 24×7