ಬೆಂಗಳೂರು: ಬಿಲ್ ವಿಲೇವಾರಿಯಲ್ಲಿ ವಿಳಂಬ, ಹಣ ಮಂಜೂರಾತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಆರೋಪಿಸಿ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಖಜಾನೆ ಇಲಾಖೆಯ ವಿವಿಧ ಕಚೇರಿಗಳ ಮೇಲೆ ಲೋಕಾಯುಕ್ತ ತಂಡ ಏಕಾಏಕಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ಬೆಂಗಳೂರು ನಗರ ಜಿಲ್ಲೆಯ 7 ಖಜಾನೆಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 5 ಖಜಾನೆ ಹಾಗೂ ಕೆಜಿಐಡಿ ಇಲಾಖೆಯ ಖಜಾನೆ-2 ಮೇಲೆ ಲೋಕಾಯುಕ್ತ ಬಿ.ಎಸ್.ಪಾಟೀಲ್, ಉಪಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಹಾಗೂ ಬಿ.ವೀರಪ್ಪ ಅವರ ನೇತೃತ್ವದಲ್ಲಿ 11 ನ್ಯಾಯಾಂಗದ ಅಧಿಕಾರಿಗಳು ಹಾಗೂ 39 ಪೊಲೀಸರು ಒಳಗೊಂಡಂತೆ 13 ತಂಡಗಳನ್ನು ರಚಿಸಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಕೆ.ಆರ್.ವೃತ್ತದಲ್ಲಿರುವ ರಾಜ್ಯ ಹುಜೂರ್ ಖಜಾನೆ ಕಚೇರಿಗೆ ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು, ಕೆಜಿಐಡಿ, ವಿ.ವಿ.ಟವರ್ ಇತರೆ ಖಜಾನೆಗಳ ಮೇಲೆ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ, ಬೆಂಗಳೂರು ಉತ್ತರ ಖಜಾನೆ ಮಲ್ಲೇಶ್ವರ, ಯಲಹಂಕ ಸೇರಿದಂತೆ ಖಜಾನೆಗಳ ಮೇಲೆ ಬಿ.ವೀರಪ್ಪ, ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಭೀಕರ್ ನೇತೃತ್ವದ ತಂಡವು ನಗರದ ಕಂದಾಯ ಭವನದಲ್ಲಿರುವ ಖಜಾನೆ ಕಚೇರಿ ಮೇಲೆ ದಾಳಿ ನಡೆಸಿದೆ.
ಖಜಾನೆಗೆ ಸಲ್ಲಿಕೆಯಾಗುವ ಬಿಲ್ಗಳ ಪರಿಶೀಲನೆಗಾಗಿ ಸಿಬ್ಬಂದಿಗೆ ಸಮಾನವಾಗಿ ಹಂಚಿಕೆ ಮಾಡುವ ರೌಂಡ್ ರಾಬಿನ್ ಮಾದರಿ ಚಾಲ್ತಿಯಲ್ಲಿದ್ದರೂ, ನಿಯಮ ಗಾಳಿಗೆ ತೂರಲಾಗುತ್ತಿದೆ. ಪರಿಶೀಲನೆ ನೆಪದಲ್ಲಿ ಬಿಲ್ಗಳನ್ನು ಕಚೇರಿಯಲ್ಲಿ ಇಟ್ಟುಕೊಂಡು ತ್ವರಿತ ವಿಲೇವಾರಿ ಮಾಡದೆ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ದಾಳಿ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Laxmi News 24×7