ಇಂಫಾಲ್: ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಬಂಡುಕೋರರು ವಾಹನದ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ಮತ್ತೋರ್ವ ವ್ಯಕ್ತಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಯೂಯಿ ಆಶಾಂಗ್ ಮತ್ತು ಥಬಂಬಾ ನಾಗಾ ನಡುವಿನ ನಿರ್ಜನ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಮೃತಪಟ್ಟ ನಾಲ್ವರೂ ಲಿಯಾಂಗ್ಮೈ ನಾಗಾ ಸಮುದಾಯಕ್ಕೆ ಸೇರಿದವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿಯ ತೀವ್ರತೆಗೆ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮುಂದಿನ ಸೇನಾಪತಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಬಳಿಕ ನಾಗಾ ಸಮುದಾಯದ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ನಾಗಾ ಪೀಪಲ್ಸ್ ಆರ್ಗನೈಸೇಷನ್ ಸೇನಾಪತಿ ಜಿಲ್ಲಾ ಕೇಂದ್ರದಲ್ಲಿರುವ ಅಂಗಡಿ-ಮುಂಗಟ್ಟುಗಳು ಹಾಗೂ ವಾಣಿಜ್ಯ ಸಂಸ್ಥೆಗಳನ್ನು ಬಂದ್ ಮಾಡುವಂತೆ ಕರೆ ನೀಡಿದೆ.
ದಾಳಿಯ ಹಿಂದಿರುವ ಬಂಡುಕೋರರು ಯಾರು? ಯಾವ ಕಾರಣಕ್ಕಾಗಿ ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದರು ಹಾಗೂ ನಾಪತ್ತೆಯಾಗಿರುವ ವ್ಯಕ್ತಿಯ ಸ್ಥಿತಿ ಏನು ಎಂಬುದರ ಕುರಿತು ಭದ್ರತಾ ಪಡೆಗಳು ಮಾಹಿತಿ ಕಲೆಹಾಕುತ್ತಿವೆ
ಅಕ್ಟೋಬರ್ನಲ್ಲಿ ಅಮಿತ್ ಶಾ ಮಣಿಪುರ ಭೇಟಿ:
ಮಣಿಪುರದಲ್ಲಿ ಮತ್ತೆ ಹಿಂಸಾಚಾರದ ಘಟನೆ ವರದಿಯಾಗಿರುವ ನಡುವೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಕ್ಟೋಬರ್ ಮೊದಲ ವಾರದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ.ನವದೆಹಲಿಯಲ್ಲಿ ಬುಧವಾರ ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್ ಅವರನ್ನು ಭೇಟಿಯಾದ ವೇಳೆ ಅಮಿತ್ ಶಾ ಈ ಕುರಿತು ಮಾಹಿತಿ ನೀಡಿದ್ದಾರೆ.
Laxmi News 24×7