ಬಾಗಲಕೋಟೆ: ಅಡುಗೆ ಅನಿಲ ಸೋರಿಕೆಯಿಂದ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು 67 ವರ್ಷದ ವೃದ್ಧೆಯೊಬ್ಬರು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.
ಜಮಖಂಡಿಯ ಚೌಡಯ್ಯನಗರದ ಮಾವಿನ ಮಸಾರಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಮನೆಯಲ್ಲಿದ್ದ ಲಕ್ಷ್ಮೀಬಾಯಿ ಪತ್ತಾರ (67) ಅವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಜಮಖಂಡಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮನೆಯಲ್ಲಿದ್ದ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ ಗಾಯಗೊಂಡಿದ್ದ ಲಕ್ಷ್ಮೀಬಾಯಿ ಅವರನ್ನು ರಕ್ಷಿಸಿ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದೃಷ್ಟವಶಾತ್ ಬೆಂಕಿ ಮನೆಯ ಇತರೆ ಭಾಗಗಳಿಗೆ ಹರಡುವ ಮುನ್ನವೇ ಅಗ್ನಿಶಾಮಕ ಸಿಬ್ಬಂದಿ ನಿಯಂತ್ರಣಕ್ಕೆ ತಂದಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.
Laxmi News 24×7