ವಿಜಯಪುರ: ನಗರದ ಹೊರವಲಯದಲ್ಲಿರುವ ಭೂತನಾಳ ಕೆರೆಯಲ್ಲಿ 6 ಜನರ ಶವಗಳು ಪತ್ತೆಯಾಗಿದ್ದು, ಕೌಟುಂಬಿಕ ಕಲಹಕ್ಕೆ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ತಾಯಿ ಶೋಭಾ ಜಾಲಗೇರಿ (45), ವಿದ್ಯಾ (16), ಸುವರ್ಣ (14), ಗೌಡೇಶ್ (ಮೂಗ) (10), ವಿಕಾಸ (5) ಸಾನಿಕಾ (7) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಆ.23ರಂದು ಗಂಡ ಮಲಕಾರಿ ಜೊತೆ ಶೋಭಾ ಜಗಳವಾಗಿತ್ತು. ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆನಂತರ ಆ.24ರಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇದಾದ ನಂತರ ಇಂದು (ಆ.26) ಭೂತನಾಳ ಕೆರೆಯಲ್ಲಿ 6 ಜನರ ಶವ ಪತ್ತೆಯಾಗಿವೆ. ಬೆಳಿಗ್ಗೆ ವಾಯುವಿಹಾರಕ್ಕಾಗಿ ಬಂದಿದ್ದ ಸಂತೋಷ ಎಂಬುವವರು ಶವಗಳನ್ನ ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ವರದಿ ಪ್ರಕಾರ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಸಂಬಂಧ ಆದರ್ಶ ನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7