Breaking News
Home / ಜಿಲ್ಲೆ / ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 129ನೇ ಜಯಂತ್ಯುತ್ಸವ.

ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 129ನೇ ಜಯಂತ್ಯುತ್ಸವ.

Spread the love

Dr. Babasaheb Ambedkar Birthday: ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 129ನೇ ಜಯಂತ್ಯುತ್ಸವ. ಸಂವಿಧಾನ ಜಾರಿಗೆ ಬಂದ ದಿನದಿಂದಲೂ ಈ ದಿನದವರೆಗೂ ಈ ದೇಶದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಸಂವಿಧಾನ ಬರೆದವರ್ಯಾರು? ಎಂಬುದರ ಬಗ್ಗೆ ಚರ್ಚೆಯಾಗುತ್ತಿದೆ. ಪ್ರಗತಿಪರ ಚಿಂತಕರು, ವಕೀಲರು ಆದ ಸಿ.ಎಸ್.ದ್ವಾರಕಾನಾಥ್ ಅವರು ತಮ್ಮ ಸವಿವರ ಲೇಖನದ ಮೂಲಕ ಈ ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ.

 

ಸಂವಿಧಾನ ಜಾರಿಗೆ ಬಂದ ದಿನದಿಂದಲೂ ಈ ದಿನದವರೆಗೂ ಈ ದೇಶದಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಸತತವಾಗಿ ಕಳೆದ ಅರವತ್ತಾರು ವರ್ಷಗಳಿಂದಲೂ ಚರ್ಚೆಯಾಗುತ್ತಿರುವ ಏಕೈಕ ವಿಷಯ ಸಂವಿಧಾನವನ್ನು ಬರೆದವರ್ಯಾರು? ಎನ್ನುವ ಬಗ್ಗೆ.

ಸಂವಿಧಾನ ರಚನಾ ಸಮಿತಿ ಇದ್ದಿತ್ತಾದರೂ ಅದರಲ್ಲಿ ಈ ದೇಶದ ಪ್ರಖ್ಯಾತ ಕಾನೂನು ಪಂಡಿತರು ಇದ್ದರೂ ಕೂಡ ಸಂವಿಧಾನವನ್ನು ನಿಸ್ಸಂಶಯವಾಗಿ ಅಕ್ಷರಶಃ ಬರೆದವರು ಡಾ.ಬಿ.ಆರ್.ಅಂಬೇಡ್ಕರ್ ಅನ್ನುವುದನ್ನು ಎಲ್ಲಾ ದಾಖಲೆಗಳು, ಪುರಾವೆಗಳು, ಸಾಕ್ಷಿಗಳು ಸಾಭೀತುಮಾಡಿವೆ. ಆದರೂ ಈ ಬಗ್ಗೆ ಅನುಮಾನಗಳು ಆಗಾಗ ಹೊಗೆಯಾಡುತ್ತಲೇ ಇರುತ್ತವೆ, ಇದನ್ನು ಬಹುತೇಕ ಸಂಘಪರಿವಾದವರು ಅವರ ಬೆಂಬಲಿಗರು ಆಗಾಗ ಅನುಮಾನ, ಅಸೂಯೆ, ಪಾಷಾಣಗಳನ್ನು ಕಾರಿಕೊಳ್ಳುತ್ತಿರುತ್ತಾರೆ. ಇದು ಆರ್​ಎಸ್​ಎಸ್​ ಮುಖ್ಯಸ್ಥ ಭಾಗವತ್ ಇರಬಹುದು, ದೇಶದ ಪ್ರಖ್ಯಾತ ಪತ್ರಕರ್ತ ಅರುಣ್‍ಶೌರಿಯಿರಬಹುದು ಅಥವಾ ಈಚೆಗೆ ಮಾತಾಡಿರುವ ಸಂಘಪರಿವಾರದ ರಾಮ ಬಹದ್ದೂರ್ ರಾಯ್ ನಂತಹ ಪಿಂಜಾರ ಪೋಲುಗಳಿರಬಹುದು.

ಇಷ್ಟಕ್ಕೂ ಈ ಸಂವಿಧಾನದ ಬಗ್ಗೆ ಇಷ್ಟೊಂದು ಅಸಹನೆ, ಅನಾಧರ ಬೆಳೆಸಿಕೊಳ್ಳಲು ಕಾರಣವೇನಿರಬಹುದು?

ಮೊದಲನೆಯದಾಗಿ ಸಮಾನತೆ, ಸಹಬಾಳ್ವೆ, ಸಹೋದರತ್ವ, ಪ್ರಜಾಪ್ರಭುತ್ವಗಳನ್ನೇ ತನ್ನ ಪ್ರಿಯಂಬಲ್‍ನಲ್ಲಿ ಹೇಳುವ ಸಂವಿಧಾನ ಇದಕ್ಕೆಲ್ಲಾ ವಿರೋಧಿಯಾದ ಮನುಧರ್ಮಶಾಸ್ತ್ರದ ಮೂಲಭೂತ ಅಂಶಗಳನ್ನು ನಿರಾಕರಿಸುತ್ತದೆ. ಶತಮಾನಗಳಿಂದ ಮನುವಿರಚಿತ ಅಥವಾ ಸುಮತೀಭಾರ್ಗವ ವಿರಚಿತ ಮನುಧರ್ಮಶಾಸ್ತ್ರವನ್ನೇ ಸಂವಿಧಾನವೆಂದು ಆಚರಣೆಯಲ್ಲಿಟ್ಟಿದ್ದ ಮನಸ್ಸುಗಳಿಗೆ ಸಹಜವಾಗಿಯೇ ಡಾ.ಅಂಬೇಡ್ಕರ್ ವಿರಚಿತ ಸಂವಿಧಾನದ ಮೂಲಭೂತ ತತ್ವಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಎರಡನೆಯದಾಗಿ ಸಂವಿಧಾನ ಎಂದಾಕ್ಷಣ ಅನೇಕ ವಿದ್ಯಾವಂತ, ಕಾನೂನು ಪಂಡಿತರಾದಿಯಾಗಿ ಅನೇಕರ ಮನಸ್ಸಿನಲ್ಲಿರುವುದು ಮೀಸಲಾತಿ, ಈ ಮೀಸಲಾತಿ ಎನ್ನುವುದು ಮೆರಿಟ್‍ಗೆ ವಿರುದ್ಧವಾಗಿದೆ, ಬಡವರಿಗೆ ಅನ್ಯಾಯವಾಗುತ್ತದೆ ಎನ್ನುವುದು ಇವರ ವಾದ ಈ ಕಾರಣಕ್ಕೆ ಸಂವಿಧಾನವನ್ನು ಕಂಡರೆ ಹಾವು ತುಳಿದಂತಾಡುತ್ತಾರೆ.

ಸಂವಿಧಾನವನ್ನು ಮತ್ತು ಅಂಬೇಡ್ಕರ್‍ರವರನ್ನು ಸಹಿಸದ ಮನಸ್ಸುಗಳು ಈ ಹಿಂದೆ ವಾಜಪೇಯಿಯವರ ಸರ್ಕಾರವಿದ್ದಾಗ ಸಂವಿಧಾನದ ಪರಾಮರ್ಶೆಗೆ ಕೈಹಾಕಿದ್ದರು. ಆಗ ಕಾನ್ಸಿರಾಂರವರು ಹೇಳಿದ್ದ ಮಾತು ಇಂದಿಗೂ ಪ್ರಸ್ತುತವೆನಿಸುತ್ತೆ “ಇಂದಿನ ಸಂವಿಧಾನಕ್ಕೆ ಸುಮಾರು 150 ವರ್ಷಗಳ ಪರಿವರ್ತನಾ ಹೋರಾಟದ ಹಿನ್ನೆಲೆಯಿದೆ.. ಇದು ಇದ್ದಕ್ಕಿದ್ದಂತೆ ಉದ್ಭವವಾದುದಲ್ಲ…” ಎನ್ನುತ್ತಾರೆ. ಮಹಾತ್ಮ ಜ್ಯೋತಿಬಾಪುಲೆ, ಸಾಹುಮಹಾರಾಜ್, ನಾಲ್ವಡಿಯಂತವರ ಪರಿವರ್ತನಾ ಆಂದೋಲನದ ಹಿನ್ನೆಲೆಯನ್ನಿಟ್ಟುಕೊಂಡು ಕಾನ್ಸಿರಾಂರವರು ಈ ಮಾತುಗಳನ್ನು ಆಡಿದ್ದರು.ಈ ವಿರೋಧ ಇಂದು ನೆನ್ನೆಯದಲ್ಲ ಸಂವಿಧಾನ ರಚನಾದಿನದಿಂದಲೂ ಪ್ರಾರಂಭವಾದುದು. ಸಂವಿಧಾನ ಅಂಗೀಕಾರವಾದುದು 1949 ನವೆಂಬರ್ 26 ರಂದು, ಜಾರಿಗೆ ಬಂದಿದ್ದು 1950 ಜನವರಿ 26 ರಂದು, ಇತಿಹಾಸಜ್ಞ ರಾಮಚಂದ್ರಗುಹಾ ಹೇಳುವಂತೆ 1949 ನವೆಂಬರ್ 30 ರ ‘ಆರ್ಗನೈಸರ್’ ಎಂಬ ಆರ್​ಎಸ್​ಎಸ್​ ಮುಖಾವಾಣಿಯಲ್ಲಿ ಅಂದಿನ ಆರೆಸೆಸ್ ಸರಸಂಘಚಾಲಕ ಗೋಳ್ವಾಲ್ಕರ್‍ರವರೇ ಈ ಸಂವಿಧಾನದ ವಿರುದ್ಧ ವಿಷಕಾರಿದ್ದಾರೆ. ಅಂಬೇಡ್ಕರ್ ಅದಾಗತಾನೆ ಕರಡನ್ನು ಸಂವಿಧಾನ ಅಸೆಂಬ್ಲಿಗೆ ನೀಡಿದ್ದರು.

“ The Worst (thing) about the new constitution Bharath” ಎನ್ನುವ ತಲೆಬರಹದಲ್ಲಿ ಬರೆದಂತೆ “ಅದರಲ್ಲಿ ಭಾರತೀಯತೆಯೇ ಇಲ್ಲ, ಪ್ರಾಚೀನ ಭಾರತದ ಸಂವಿಧಾನಿಕ ಕಾನೂನುಗಳಿಲ್ಲ, ಅವುಗಳ ಕೇಂದ್ರಗಳು, ನಾಮಕರಣಗಳು ಮತ್ತು ಶಾರೀರಿಕಗಳು ಕೂಡ ಇಲ್ಲ. ಮನು ಇದನ್ನೆಲ್ಲಾ ಬಹಳ ಹಿಂದೆಯೇ ಹೇಳಿದ್ದಾರೆ ನಮ್ಮ ಸಂವಿಧಾನ ಪಂಡಿತರಿಗೆ ಇದೆಲ್ಲಾ ಏನೂ ಅಲ್ಲ” ಎಂದು ವ್ಯಂಗ್ಯವಾಡಿದ್ದಾರೆ.ಇದರೊಂದಿಗೆ ಹಿಂದು ಮಹಿಳೆಯರಿಗೆ ಪಿತ್ರಾರ್ಜಿತ ಆಸ್ಥಿ ಕೊಡುವುದರ ಕುರಿತು ಕೂಡ ಆರ್​ಎಸ್​ಎಸ್​ ವಿರೋಧ ವ್ಯಕ್ತ ಮಾಡಿದೆ, ಡಿಸೆಂಬರ್ 14-1949ರ ಸಂಚಿಕೆಯಲ್ಲಿ ಬಿ.ಎನ್.ರಾವ್ ಮತ್ತು ಅಂಬೇಡ್ಕರ್ ಇಬ್ಬರನ್ನು ಸೇರಿಸಿ ಹೀಯಾಳಿಸುವ organizer “ಇವರಿಬ್ಬರೂ ಹಿಂದು ವಿಧಿಗಳ ಪ್ರಕಾರ ಮದುವೆಯಾದವರಲ್ಲ ಇಂತವರಿಂದ ಧರ್ಮದ Reform ಮಾಡಿಸುವುದು ಹಿಂದುಧರ್ಮದ ದುರಂತ ಮತ್ತು ರಾಕ್ಷಸೀ ಕೃತ್ಯ,” ಎಂದು ಹಿಯಾಳಿಸಿದ್ದಾರೆ.

ಇದು ನಮ್ಮ ಭಾರತದ ಸಂವಿಧಾನ ಆಗಲಿಕ್ಕೆ ಸಾಧ್ಯವಿಲ್ಲ ಎನ್ನುವಂತೆ ಸ್ಪಷ್ಟವಾಗಿ ನುಡಿದಿದ್ದಾರೆ. ದಾಖಲಿಸಿದ್ದಾರೆ. ಅಸಮಾನತೆ, ಜಾತೀಯತೆ, ಮತಾಂಧತೆಯನ್ನೇ ಪ್ರತಿಪಾದಿಸುವವರು ಅಂಬೇಡ್ಕರ್‍ರವರ ಸಂವಿಧಾನವನ್ನು ಹೇಗೆ ಒಪ್ಪಲು ಸಾಧ್ಯ? ಈ ಕಾರಣಕ್ಕೆ ಈ ಅಸಮದಾನವನ್ನು ಇಂದಿಗೂ ಇವರ ಅನುಯಾಯಿಗಳು ಮುಂದುವರೆಸಿದ್ದಾರೆ.

ಸಂವಿಧಾನವನ್ನು ಅಂಬೇಡ್ಕರ್‍ರವರೇ ಬರೆಯಲಿಲ್ಲವೆಂದು ಬಿಟ್ಟರೆ ಸಂವಿಧಾನವನ್ನು ವಿರೋಧ ಮಾಡುವುದು ಸುಲಭ. ನಂತರ ಅದರ ಮೂಲತತ್ವಗಳಾದ ಸಮಾನತೆ, ಸಹೋದರತ್ವ, ಪ್ರಜಾಪ್ರಭುತ್ವಗಳನ್ನು ಎದುರಿಸಬಹುದು, ಆದರೆ ಸಂವಿಧಾನದ ಪ್ರತಿ ಶಬ್ಧವನ್ನು ಬಾಬಾಸಾಹೇಬರೇ ಬರೆದರೆನ್ನಲಿಕ್ಕೆ ನಮ್ಮ ಎದುರು ಸಾಕಷ್ಟು ವಾಸ್ತವಗಳಿವೆ. ದುರಂತವೆಂದರೆ ದಲಿತ ಅಸ್ಪೃಶ್ಯರೊಬ್ಬರು ಒಂದು ಮಹತ್‍ಕಾರ್ಯವನ್ನು ಮಾಡಿದಾಗ ಅದನ್ನು ಪರಿಗಣಿಸಲು ಈ ದೇಶದ ಸ್ಪೃಶ್ಯ ಮನಸ್ಸು ಎಷ್ಟೆಲ್ಲಾ ಪರಿದಾಡುತ್ತದೆ, ಅಸಹನೆಯಿಂದ ಒದ್ದಾಡುತ್ತದೆ ಎನ್ನಲಿಕ್ಕೆ ಇವೆಲ್ಲಾ ನಿದರ್ಶನಗಳು.

ಇದನ್ನು ಕಂಡೇ ಇರಬೇಕು “ಅವರಿಗೆ ಒಂದು ರಾಮಾಯಣದಂತಹ ಎಪಿಕ್ ಬೇಕಿತ್ತು ಅದಕ್ಕೆ ಶೂದ್ರ ವಾಲ್ಮಿಕಿಯನ್ನು ನಂಬಬೇಕಾಯಿತು ಅವರಿಗೆ ಮಹಾಭಾರತದಂತಹ ಎಪಿಕ್ ಬೇಕಾದಾಗ ವ್ಯಾಸನಂತಹ ಮತ್ತೊಬ್ಬ ಶೂದ್ರನನ್ನು ಆದರಿಸಬೇಕಾಯಿತು. ಅವರಿಗೆ ಸಂವಿಧಾನ ಬರೆಯಬೇಕೆನಿಸಿದಾಗ ಅಸ್ಪೃಶ್ಯನಾದ ನಾನು ಬೇಕಾಯಿತು..” ಎಂದು ಬಾಬಾಸಾಹೇಬರು ನುಡಿದದ್ದು.

ಸಂವಿಧಾನ ರಚನೆಯಾದ ಮೇಲೆ ಆಗುತ್ತಿರುವ ಈ ವಿವಾದಗಳು ಒತ್ತಟ್ಟಿಗಿರಲಿ, ಸಂವಿಧಾನ ರಚನಾ ಮುಂಚೆಯೇ ಅನೇಕರು ಸಂವಿಧಾನ ರಚನಾ ಸಮಿತಿಯ ಮೇಲೆ ಬಾಯಿಗೆ ಬಂದಂತೆಲ್ಲಾ ಮಾತಾಡತೊಡಗಿದ್ದರು. ಕೆಲವರು ಅಸಹನೆ ವ್ಯಕ್ತಪಡಿಸಿದಂತೆ ಅಗೌರವವನ್ನು ಕೂಡ ವ್ಯಕ್ತಪಡಿಸಿದರು ಅದಕ್ಕೆಲ್ಲಾ ಅಂದು ಬಾಬಾಸಾಹೇಬರೇ ಉತ್ತರಿಸಿದರು.

ಸದಸ್ಯರೊಬ್ಬರು ಕರಡು ರಚನಾಸಮಿತಿಯನ್ನು “ತೇಲುತ್ತಿರುವ ಸಮಿತಿ” ಎಂದು ವ್ಯಂಗ್ಯವಾಡಿದರು ಅದಕ್ಕೆ ಬಾಬಾಸಾಹೇಬರು ಉತ್ತರಿಸುತ್ತಾ “ಅವರಿಗೆ ನಿಯಂತ್ರಣ ಸಹಿತವಾಗಿ ತೇಲುವುದಕ್ಕೂ ನಿಯಂತ್ರಣ ರಹಿತವಾಗಿ ತೇಲುವುದಕ್ಕೂ ವ್ಯತ್ಯಾಸವಿರುವ ಬಗ್ಗೆ ಅರಿವಿದ್ದಂತಿಲ್ಲ ಕರಡು ರಚನಾ ಸಮಿತಿ ತೇಲುತಿದ್ದರೂ ನಿಯಂತ್ರಣ ಸಹಿತವಾಗಿ ತೇಲುತ್ತಿದೆ.. ಇದು ಸಿಕ್ಕರೆ ಸಿಗಲಿ, ಇಲ್ಲದಿದ್ದರೆ ಇಲ್ಲ ಎಂಬ ಹಾಗೆ ಮೀನಿಗೆ ಗಾಳ ಹಾಕುವ ಪ್ರಯತ್ನ ಆಗಿರಲಿಲ್ಲ.. ಗೊತ್ತಿದ್ದ ನೀರಿನಲ್ಲಿ ಹಿಡಿಯತಕ್ಕ ವಿಧಾನವನ್ನು ಹಿಡಿಯುವ ಪ್ರಯತ್ನವಾಗಿತ್ತು..” ಎನ್ನುತ್ತಾರೆ.

ಸಂವಿಧಾನವನ್ನು ಬಾಬಾಸಾಹೇಬರು ಬರೆದರೋ ಇಲ್ಲವೋ ಎಂಬ ಸಿನಿಕತನದ ಪ್ರಶ್ನೆಗೆ ಬಾಬಾಸಾಹೇಬರು ಉತ್ತರಿಸಬೇಕಿಲ್ಲ. ಸುಮಾರು ಮೂರೂವರೆ ವರ್ಷಗಳ ಕಾಲ ಸಂವಿಧಾನದ ಬಗ್ಗೆ ಪಾರ್ಲಿಮೆಂಟಿನಲ್ಲಿ ನಡೆದ ಸುಧೀರ್ಘ ಚರ್ಚೆಯಲ್ಲಿ ಎಲ್ಲಾ ಮಾನ್ಯ ಸದಸ್ಯರಿಗೂ ಬಾಬಾಸಾಹೇಬರು ನೀಡಿದ ಉತ್ತರಗಳೇ ಇದಕ್ಕೆ ಉತ್ತರ ನೀಡುತ್ತವೆ. (ಈ ಕಾನ್ಸಿಟಿಟ್ಯೂಷನಲ್ ಡಿಬೇಟ್‍ಗಳನ್ನು ಐದು ಬೃಹತ್ ವಾಲ್ಯೂಮ್‍ಗಳಾಗಿ ಕೇಂದ್ರ ಸರ್ಕಾರವೇ ಪ್ರಕಟಿಸಿದೆ).

ಕಡೆಗೆ 1949 ನವೆಂಬರ್ 26 ರಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ರಾಜೇಂದ್ರಪ್ರಸಾದ್‍ರು ಮಾತನಾಡುತ್ತಾ “…ಅಧ್ಯಕ್ಷೀಯ ಸ್ಥಾನದಲ್ಲಿ ಕುಂತು, ದಿನನಿತ್ಯದ ನಡಾವಳಿಕೆಗಳನ್ನು ಗಮನಿಸಿದ್ದೇನೆ.. ನನ್ನ ಅರಿವಿಗೆ ಬಂದಿದ್ದೇನೆಂದರೆ… ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‍ರವರು ತಮ್ಮ ಅನಾರೋಗ್ಯದ ಹೊರತಾಗಿಯೂ ಅದೆಂತಹ ಅಪರೂಪದ ಶ್ರದ್ದೆ ಮತ್ತು ಉತ್ಸಾಹದಿಂದ ಕೆಲಸಮಾಡಿದ್ದಾರೆ…” ಎಂದು ಶ್ಲಾಘಿಸಿದಾಗ ಇಡೀ ಪಾರ್ಲಿಮೆಂಟ್ ಚಪ್ಪಾಳೆ ತಟ್ಟುತ್ತದೆ.

ಮುಂದುವರೆದ ರಾಜೇಂದ್ರಪ್ರಸಾದರು “…ನಿಜ ಹೇಳಬೇಕೆಂದರೆ ಅಂಬೇಡ್ಕರ್ ಅವರನ್ನು ನಾವು ಕರಡು ಸಮಿತಿಯ ಮುಂಚೂಣಿಯ ಜವಾಬ್ದಾರಿ ನೀಡಿದ್ದು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಅದೆಷ್ಟು ಸಮರ್ಪಕವಾಗಿತ್ತೆಂದರೆ ಖಂಡಿತ ಅದಕ್ಕಿಂತ ಸೂಕ್ತ ನಿರ್ಧಾರ ನಮ್ಮಿಂದ ಸಾಧ್ಯವೇ ಇರಲಿಲ್ಲ…” ಎನ್ನುತ್ತಾರೆ. ಆಶ್ಚರ್ಯವೆಂಬಂತೆ ಅಂಬೇಡ್ಕರ್ ರವರು ತಮ್ಮ ಆಯ್ಕೆಗೆ ನ್ಯಾಯ ಒದಗಿಸಿದ್ದಷ್ಟೇ ಅಲ್ಲ ಅವರು ಮಾಡಿರುವಂತಹ ಒಟ್ಟಾರೆ ಕಾರ್ಯಕ್ಕೆ ಅವರು ಒಂದು ರೀತಿಯ ಹೊಳಪನ್ನು ತಂದಿದ್ದಾರೆ..” ಎನ್ನುತ್ತಾರೆ.

ನಾಲ್ಕೈದು ವರ್ಷಗಳ ಹಿಂದೆ “ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಟೀಚರ್ಸ್ ಟ್ರೈನಿಂಗ್ ರಿಸರ್ಚ್” ಅಡಿಯಲ್ಲಿ ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳ ಉಪನ್ಯಾಸಕರಿಗೆ ತರಬೇತಿ ನೀಡಲು ಸಂವಿಧಾನದ ಕೈಪಿಡಿಯೊಂದನ್ನು ತಂದು ಸಂವಿಧಾನವನ್ನು ಡಾ.ಅಂಬೇಡ್ಕರ್ ಬರೆಯಲೇ ಇಲ್ಲ ಎನ್ನುವಂತೆ ವಿದ್ಯಾರ್ಥಿಗಳನ್ನು ದಿಕ್ಕುತಪ್ಪಿಸುತಿದ್ದು, ಇದರ ನಂತರ ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಥಮ ಬಿ.ಎ, ಬಿಕಾಂ ಪದವಿಗಾಗಿ “ಭಾರತ ಸಂವಿಧಾನ, ಮಾನವ ಹಕ್ಕುಗಳ ಅಧ್ಯಯನ” ಎಂಬ ಸುಮಾರು 270 ಪುಟಗಳ ಸವಿಸ್ತಾರ ಪಠ್ಯ ರಚಿಸಿ ಡಾ.ಅಂಬೇಡ್ಕರ್‍ರವರ ಹೆಸರೇ ಬಾರದಂತೆ ಎಚ್ಚರವಹಿಸಿತ್ತು.

ಇದನ್ನೂ ಓದಿ: ಗಾಂಧಿ ಕನಸಿನ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ: ಹಿರಿಯ ಚೇತನ ಎಚ್.ಎಸ್. ದೊರೆಸ್ವಾಮಿ

ಸಂವಿಧಾನ ರಚನೆಗೆ ಸಂಬಂಧಿಸಿದಂತೆ ಬರೆಯುತ್ತಾ.. ಈ ಎರಡು ಪುಸ್ತಕಗಳ ಬಗ್ಗೆ ನಾನು ಪ್ರಮುಖ ಪತ್ರಿಕೆಯೊಂದಕ್ಕೆ ಬರೆದ ಇದನ್ನು ಓದಿ ಬಿ.ವಿಎಸ್. ವಿದ್ಯಾರ್ಥಿಗಳು ಮತ್ತು ಇತರೆ ದಲಿತ ಸಂಘಟನೆಗಳು ಪ್ರತಿಭಟನೆಯ ಮೂಲಕ ಇವನ್ನು ರದ್ದು ಪಡಿಸಿದರು.
ಸಂವಿಧಾನದ ಕರಡು ರಚನಾ ಸಮಿತಿಗೆ ಡಾ.ಅಂಬೇಡ್ಕರ್‍ರವನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿ ಏಳು ಜನ ಸದಸ್ಯರನ್ನು ನೇಮಿಸಲಾಯಿತು ಅವರಲೊಬ್ಬರು ಟಿ.ಟಿ.ಕೃಷ್ಣಮಾಚಾರಿಯವರು ಅವರು ಸಂಸತ್ತಿನಲ್ಲಿ ಮಾತನಾಡಿದ್ದು ಇಂದಿನ ಅನೇಕ ಒಡಕು ಬಾಯಿಗಳಿಗೆ ಬೀಗ ಹಾಕಲು ಸಾಧ್ಯವಾಗುತ್ತದೆ.

ಟಿ.ಟಿ.ಕೆ ಸಂಸತ್ತಿನಲ್ಲಿ ಮಾತನಾಡುತ್ತಾ “..ಡಾ.ಅಂಬೇಡ್ಕರ್‍ರವರ ಅಧ್ಯಕ್ಷತೆಯಲ್ಲಿ ನನ್ನನ್ನು ಸೇರಿದಂತೆ ಏಳು ಸದಸ್ಯರನ್ನು ನೇಮಿಸಿದ್ದೀರಿ ಅವರಲ್ಲೊಬ್ಬರು ರಾಜೀನಾಮೆ ನೀಡಿದರು, ಒಬ್ಬರು ಅಕಾಲ ಮರಣಹೊಂದಿದರು, ಒಬ್ಬರು ಸ್ವಂತ ಕೆಲಸಗಳಿಗಾಗಿ ಅಮೆರಿಕದಲ್ಲೇ ಉಳಿದರು, ಒಬ್ಬರು ರಾಜಕೀಯ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡರು ಇಬ್ಬರು ಅನಾರೋಗ್ಯದಿಂದ ಸಂವಿಧಾನ ರಚನಾ ಕಾರ್ಯದಿಂದ ದೂರ ಉಳಿಯಬೇಕಾಯಿತು ಕೊನೆಗೆ ಕರಡು ಸಮಿತಿಯ ಅಧ್ಯಕ್ಷರಾದ ಡಾ.ಅಂಬೇಡ್ಕರ್‍ರವರೊಬ್ಬರ ಮೇಲೆಯೇ ಭಾರತ ಸಂವಿಧಾನ ರಚಿಸುವ ಪೂರ್ಣ ಜವಾಬ್ದಾರಿ ಬಿದ್ದಿತು. ಅವರಿಗೆ ಕೃತಜ್ಞರಾಗಿರಬೇಕು…”

ಡಾ.ಅಂಬೇಡ್ಕರ್‍ರವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಜಸ್ಟೀಸ್ ವಿ.ಆರ್.ಕೃಷ್ಣ ಅಯ್ಯರ್‍ರವರ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು. ಈ ಉಪನ್ಯಾಸಗಳನ್ನು ಎರಡು ಪುಸ್ತಕಗಳನ್ನಾಗಿ ಪ್ರಕಟಿಸಲಾಗಿದೆ “Dr.Ambedkar and Dalit future” ಮತ್ತು “Social justice and the undone vast” ಎಂಬ ಈ ಪುಸ್ತಕಗಳಲ್ಲಿ ಡಾ.ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ಕೃಷ್ಣ ಅಯ್ಯರ್ ಸುಧೀರ್ಘವಾಗಿ ದಾಖಲಿಸುತ್ತಾ “The creative intelegency and compassionate commitments of this thunderbolts of a man became part of the Instrumentality of constitution making.” ಎಂದು ಹೇಳುತ್ತಾ ಸಂವಿಧಾನ ರಚಿಸಿದ ಅಂಬೇಡ್ಕರ್‍ರವರ ಅಪಾರ ಜ್ಞಾನ, ಕಾಳಜಿ ಮತ್ತು ಈ ದೇಶದ ಬಗ್ಗೆ ಅವರಿಗಿರುವ ಪ್ರೇಮ ಎಲ್ಲವನ್ನು ಪದರಪದರವಾಗಿ ತೆರೆದಿಡುತ್ತಾರೆ

ಡಾ.ಅಂಬೇಡ್ಕರ್‍ರವರ ಕಾರ್ಯವನ್ನು ನೆಹರು, ಪಟೇಲ್, ರಾಜೇಂದ್ರಪ್ರಸಾದ್ ರಾದಿಯಾಗಿ ಎಲ್ಲರೂ ಪ್ರಶಂಸಿಸುತ್ತಾರೆ. ಮದ್ರಾಸಿನ ಮುನಿಸ್ವಾಮಿ ಪಿಳ್ಳೆ ಬಾಬಾಸಾಹೇಬರನ್ನು ನಂದನಾರ್, ತಿರುಪನಾಳ್ವಾರ್, ತಿರುವಳ್ಳವರ್‍ಗೆ ಹೋಲಿಸಿದ್ದಾರೆ, ಸೇಠ್ ಗೋವಿಂದದಾಸ್ ವರ್ತಮಾನದ ಮನು ಎನ್ನುತ್ತಾರೆ, ಇದೇ ರೀತಿ ಅನಂತಶಯನ ಅಯ್ಯಂಗಾರ, ಪಂಡಿತ ಠಾಕೂರ್ ದಾಸ್ ಭಾರ್ಗವ, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯಂಗಾರ್ ಖಾಂಡೇಕರ್, ಟಿ.ಪ್ರಕಾಶಂ ರಂತವರು ಸಂವಿಧಾನ ರಚಿಸಿದ ಬಾಬಾಸಾಹೇಬರನ್ನು ಹಾಡಿಹೊಗಳುತ್ತಾರೆ.
ಕಡೆಗೆ ಜಸ್ಟೀಸ್ ವಿ.ಆರ್.ಕೃಷ್ಣ ಅಯ್ಯರ್‍ರವರ ಮಾತುಗಳನ್ನು ಯತಾವತ್ತಾಗಿ ನೀಡುವ ಮೂಲಕ ಈ ಲೇಖನಕ್ಕೆ ನಾಂಧಿ ಹಾಡುತ್ತೇನೆ.

 

ಲೇಖಕರು- ಸಿ.ಎಸ್. ದ್ವಾರಕಾನಾಥ್

(ಈ ಮೇಲಿನ ಲೇಖನ ಲೇಖಕರ ಅಭಿಪ್ರಾಯಕ್ಕೆ ಒಳಪಟ್ಟಿದ್ದು.laxmi news ಕನ್ನಡಕ್ಕೂ ಈ ಲೇಖನಕ್ಕೂ ಸಂಬಂಧವಿಲ್ಲ)


Spread the love

About Laxminews 24x7

Check Also

ಮಂಗಳೂರಿನಲ್ಲಿ ಯುವತಿ ನಾಪತ್ತೆ ಪ್ರಕರಣ: ಬಜರಂಗದಳ ದಾಳಿಗೆ ಹೆದರಿ ನಾಪತ್ತೆಯಾಗಿರುವ ಅನುಮಾನ

Spread the loveಮಂಗಳೂರು, ಫೆಬ್ರವರಿ 26: ಪಿಹೆಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣ (Missing Case) ಇದೀಗ ಹಲವು ಅನುಮಾನಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ