Breaking News

ತಾಯಿನೇ ಎಲ್ಲ.. ಬದಲಾಗೋದಿಲ್ಲ.. ಜಬಲ್ಪುರ ಬೋಟ್ ದುರಂತದಲ್ಲಿ ಮನಕಲಕುವ ಘಟನೆ…

Spread the love

ಮಧ್ಯಪ್ರದೇಶದ ಜಬಲ್ಪುರದಲ್ಲಿ ನರ್ಮದಾ ನದಿಗೆ ನಿರ್ಮಿಸಲಾಗಿರುವ ಬಾರ್ಗಿ ಡ್ಯಾಮ್‌ನಲ್ಲಿ ನಿನ್ನೆ ಪ್ರವಾಸಿಗರು ಇದ್ದ ಬೋಟ್ ಮಗುಚಿ 9 ಜನ ಮೃತಪಟ್ಟಿದ್ದಾರೆ. ಬೋಟ್‌ನಲ್ಲಿ 30 ಜನ ಇದ್ದರು. ಅದರಲ್ಲಿ 17 ಜನರನ್ನು ರಕ್ಷಿಸಲಾಗಿದ್ದು, ಇನ್ನೂ 4 ಜನರ ಪತ್ತೆಗೆ ತೀವ್ರ ಕಾರ್ಯಾಚರಣೆ ನಡೆದಿದೆ.
9 ಜನರ ಶವಗಳನ್ನು ಪತ್ತೆ ಹಚ್ಚಿ ನೀರಿನಿಂದ ಹೊರತೆಗೆಯಲಾಗಿದ್ದು, ಅದರಲ್ಲಿ ದೆಹಲಿ ಮೂಲದ ತಾಯಿಯೊಬ್ಬಳು ತನ್ನ ಮಗುವನ್ನು ಎದೆಗಪ್ಪಿಕೊಂಡೇ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಮಗುವನ್ನು ಉಳಿಸುವ ಅವರ ಪ್ರಯತ್ನ ವಿಫಲವಾಗಿರುವುದು ಹೃದಯ ವಿದ್ರಾವಕ ದೃಶ್ಯಕ್ಕೆ ಸಾಕ್ಷಿಯಾಗಿದೆ.

ಸದ್ಯ ಒಂದೇ ಲೈಫ್ ಜಾಕೆಟ್‌ನಲ್ಲಿ ತಾಯಿ-ಮಗು ಶವವಾಗಿ ಇರುವ ಈ ಫೋಟೊ ಸಾಕಷ್ಟು ಹರಿದಾಡುತ್ತಿದ್ದು, ‘ತಾಯಿ ಪ್ರೀತಿಗೆ ಸಾಟಿಯಿಲ್ಲ’ ಎಂಬುದನ್ನು ತೋರಿಸುತ್ತಿದೆ.

ಈ ಫೋಟೊವನ್ನು ಪೊಲೀಸ್ ಅಧಿಕಾರಿ ಒಬ್ಬರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡು ಕಂಬನಿ ಮಿಡಿದಿದ್ದಾರೆ. ‘ಈ ಜಗತ್ತಿನಲ್ಲಿ ತಾಯಿಗಿಂತ ದೊಡ್ಡದು ಯಾವುದೂ ಇಲ್ಲ’ ಎಂದಿದ್ದಾರೆ.

ಲೈಫ್ ಜಾಕೆಟ್ ಧರಿಸಿದ್ದರೂ ಹೇಗೆ ಅವರು ಬದುಕಲಿಲ್ಲ? ಎಂದು ಕೆಲವರು ಪ್ರಶ್ನಿಸಿದ್ದಾರೆ. ‘ಹೌದು, ಲೈಫ್ ಜಾಕೆಟ್ ನೀರಿನಲ್ಲಿ ಸುರಕ್ಷಿತ. ಆದರೆ, ಬೋಟ್ ಒಮ್ಮೆಲೆ ಮಗುಚಿದ್ದರಿಂದ ನಾಲ್ಕು ವರ್ಷದ ಮಗುವನ್ನು ತಾಯಿ ರಕ್ಷಿಸುವ ಸಂದರ್ಭದಲ್ಲಿ ಬೋಟ್‌ನ ಕ್ಯಾಬಿನ್‌ ಒಳಗಡೆ ಇಬ್ಬರೂ ಸಿಲುಕಿದ್ದಾರೆ. ಆಗ ಕ್ಯಾಬಿನ್ ಬಾಗಿಲು ತೆರೆಯದೇ ಇಬ್ಬರೂ ಉಸಿರುಗಟ್ಟಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಒಂದು ವೇಳೆ ನೀರಿನಲ್ಲಿ ಮೇಲೆ ಬಂದಿದ್ದರೆ, ಲೈಫ್ ಜಾಕೆಟ್‌ನ ಸಹಾಯದಿಂದ ಇಬ್ಬರೂ ಬದುಕಿರುತ್ತಿದ್ದರೇನೊ?’ ಎಂದು ತಿಳಿಸಿದ್ದಾರೆ.

ಈ ಫೋಟೊವನ್ನು ಹಂಚಿಕೊಂಡು ಎಬಿಪಿ, ಹಿಂದೂಸ್ತಾನ್ ಟೈಮ್ಸ್, ಎನ್‌ಡಿಟಿವಿ, ದಿ ಇಂಡಿಯನ್ ಎಕ್ಸ್‌ಪ್ರೆಸ್ ವೆಬ್‌ಸೈಟ್‌ಗಳು ವರದಿ ಮಾಡಿದ್ದು, ಫೋಟೊ ಸತ್ಯಾಸತ್ಯತೆಯನ್ನು ಖಚಿತಪಡಿಸಿವೆ. ದುರಂತ ಸ್ಥಳದಲ್ಲಿ ಎನ್‌ಡಿಆರ್‌ಎಫ್ ಸಿಬ್ಬಂದಿ ಕ್ಲಿಕ್ಕಿಸಿದ ಚಿತ್ರ ಇದಾಗಿದೆ ಎಂದು ತಿಳಿಸಿವೆ.

ಗುರುವಾರ ಸ್ಥಳೀಯ ಹಬ್ಬದ ಸಂಭ್ರಮದ ಪ್ರಯುಕ್ತ ದೆಹಲಿಯಿಂದ ಬಂದಿದ್ದ ಕೆಲ ಪ್ರವಾಸಿಗರು ಡ್ಯಾಮ್‌ನ ಬೋಟ್ ಪ್ರವಾಸ ಕೈಗೊಂಡಿದ್ದರು. ಮೃತರು ದೆಹಲಿ ಹಾಗೂ ಜಬಲ್ಪುರದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶ ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ಲೋಧಿ ಅವರು ಸ್ಥಳದಲ್ಲಿದ್ದು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ನಂತರ ದುರಂತದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು. ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ನಿಶ್ಚಿತ ಎಂದಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.


Spread the love

About Laxminews 24x7

Check Also

ಗ್ಯಾಸ್ ಬೆಲೆ ಏರಿಕೆ ಮಾಡಿ, ಸೌದೆ ಭಾಗ್ಯ ಕೊಡುತ್ತಿದ್ದಾರೆ: ಡಿಕೆಶಿ

Spread the love ಬೆಂಗಳೂರು: ಗ್ಯಾಸ್ ಬೆಲೆ ಏರಿಕೆ ಮಾಡಿ, ಸೌದೆ ಭಾಗ್ಯ ಕೊಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ