Breaking News

ಆಂಧ್ರ ಕರಾವಳಿಗೆ ಅಪ್ಪಳಿಸಿದ ಅರ್ನಾಬ್ ಚಂಡಮಾರುತ – 135 ಕಿ.ಮೀ ವೇಗದಲ್ಲಿ ಬೀಸುತ್ತಿದೆ ಗಾಳಿ

Spread the love

ವಿಶಾಖಪಟ್ಟಣಂ: ಬಂಗಾಳಕೊಲ್ಲಿಯಲ್ಲಿ ಉಂಟಾದ ತೀವ್ರ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಭೀಕರ ಸ್ವರೂಪ ಪಡೆದುಕೊಂಡಿರುವ ಅರ್ನಾಬ್ ಚಂಡಮಾರುತವು ಇಂದು ಮುಂಜಾನೆ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ ದಕ್ಷಿಣ ಮತ್ತು ಪೂರ್ವ ಭಾರತದ ಕರಾವಳಿ ತೀರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕಡಲತೀರಗಳಲ್ಲಿ ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.

ಬಂಗಾಳಿ ಭಾಷೆಯಲ್ಲಿ ‘ಸಮುದ್ರ’ ಎಂಬ ಅರ್ಥವನ್ನು ಹೊಂದಿರುವ ಈ ‘ಅರ್ನಾಬ್’ ಸೈಕ್ಲೋನ್, ಆಂಧ್ರದ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವೆ ಯಾಣಂ ಕರಾವಳಿಯನ್ನು ಪ್ರವೇಶಿಸುತ್ತಿದೆ. ಈ ವೇಳೆ ಗಂಟೆಗೆ 125 ರಿಂದ 135 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗರಿಷ್ಠ 150 ಕಿ.ಮೀ ವೇಗದವರೆಗೆ ಬೀಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಯು ಮುಂದಿನ ಮೂರು ಗಂಟೆಗಳ ಕಾಲ ಮುಂದುವರಿಯಲಿದ್ದು, ಬಳಿಕ ಚಂಡಮಾರುತದ ತೀವ್ರತೆ ಕ್ರಮೇಣ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆಯ ಗಂಟೆಯ ಬುಲೆಟಿನ್ ತಿಳಿಸಿದೆ.

ಕಳೆದ ಮೂರು ಗಂಟೆಗಳಲ್ಲಿ ಗಂಟೆಗೆ 3 ಕಿ.ಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಚಲಿಸಿರುವ ಚಂಡಮಾರುತ, ಮೊದಲು ವಾಯುವ್ಯ ಹಾಗೂ ನಂತರ ಉತ್ತರ-ವಾಯುವ್ಯ ದಿಕ್ಕಿನತ್ತ ಸಾಗುವ ಸಾಧ್ಯತೆಯಿದೆ.

ಚಂಡಮಾರುತ ಅಪ್ಪಳಿಸುತ್ತಿದ್ದಂತೆ ಕಾಕಿನಾಡದಲ್ಲಿ ಹಲವೆಡೆ ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿಶಾಖಪಟ್ಟಣಂನಲ್ಲಿಯೂ ಬಿರುಗಾಳಿ-ಮಳೆಗೆ ಮರಗಳು ಉರುಳಿಬಿದ್ದು ಬೀಚ್ ರಸ್ತೆ ಹಾಗೂ ಸೀತಮ್ಮಧಾರ ಪ್ರದೇಶಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಮುಂದಿನ 4 ರಿಂದ 5 ಗಂಟೆಗಳಲ್ಲಿ ಸಮುದ್ರದಲ್ಲಿ 1.5 ರಿಂದ 2.5 ಮೀಟರ್ ಎತ್ತರದ ಬೃಹತ್ ಅಲೆಗಳು ಏಳಲಿದ್ದು, ಆಂಧ್ರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ. ವಿಶೇಷವಾಗಿ ಕಾಕಿನಾಡ ಮತ್ತು ಯಾಣಂ ಭಾಗದಲ್ಲಿ ಹೆಚ್ಚಿನ ಅಲೆಗಳ ಎಚ್ಚರಿಕೆ ನೀಡಲಾಗಿದೆ.

ಅಕ್ಟೋಬರ್ 27ರ ಬೆಳಗ್ಗೆ 8:30 ರಿಂದ ಅಕ್ಟೋಬರ್ 28ರ ಮುಂಜಾನೆ 3 ಗಂಟೆಯ ಅವಧಿಯಲ್ಲಿ ವಿಶಾಖಪಟ್ಟಣಂ ಹಾಗೂ ಅನಕಾಪಲ್ಲಿ ಜಿಲ್ಲೆಗಳ ಹಲವೆಡೆ 200 ಮಿ.ಮೀ ಗೂ ಅಧಿಕ ಭಾರೀ ಮಳೆ ದಾಖಲಾಗಿದೆ. ಚಂಡಮಾರುತದ ಪರಿಣಾಮ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲೂ ಭಾರಿ ಮಳೆ ಮತ್ತು ಗಾಳಿ ಮುಂದುವರಿದಿದೆ.

ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮುಂದಿನ 4 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ದಕ್ಷಿಣ ಹಾಗೂ ಪೂರ್ವದ ರಾಜ್ಯಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

ಕಡಲು ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ ಮತ್ತು ಕರಾವಳಿಯ ಪ್ರವಾಸೋದ್ಯಮ ತಾಣಗಳನ್ನು ಮುಚ್ಚಲಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಕರಾವಳಿ ಭಾಗದ ಪ್ರಮುಖ ಮಾರ್ಗಗಳಲ್ಲಿ ರಸ್ತೆ ಸಂಚಾರವನ್ನು ಕಡಿತಗೊಳಿಸಲಾಗಿದೆ.

ರೈಲ್ವೆ ಹಾಗೂ ವಿಮಾನಯಾನ ಸೇವೆಗಳ ಮೇಲೆ ಚಂಡಮಾರುತ ತೀವ್ರ ಹೊಡೆತ ನೀಡಿದ್ದು, ಮುನ್ನೆಚ್ಚರಿಕೆಯಾಗಿ 50ಕ್ಕೂ ಹೆಚ್ಚು ರೈಲುಗಳು ಹಾಗೂ 30ಕ್ಕೂ ಹೆಚ್ಚು ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.


Spread the love

About Laxminews 24x7

Check Also

ಪ್ರಿಯತಮೆ ದೂರವಾದ್ಲು ಅಂತಾ ರೊಚ್ಚಿಗೆದ್ದ ಪಾಗಲ್ ಪ್ರೇಮಿ – ಲವರ್ ಬಾವನ ಬೈಕ್‌ಗೆ ಬೆಂಕಿ ಹಚ್ಚಿ ವಿಕೃತಿ!

Spread the loveಬೆಂಗಳೂರು: ಸೋಷಿಯಲ್ ಮಿಡೀಯಾದಲ್ಲಿ ಶುರುವಾದ ಪರಿಚಯ ಪ್ರೀತಿಗೆ ತಿರುಗಿತ್ತು. ಆದರೆ ಆ ಪ್ರೀತಿಗೆ ಹೆಚ್ಚು ದಿನ ಬಾಳಲಿಲ್ಲ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ