ಉಡುಪಿ: ಕುಂದಾಪುರ ತಾಲೂಕಿನ ಕೋಟ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ಮತ್ತು ಸೈಕಲ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಸೈಕಲ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದರು.
ಚಿಕಿತ್ಸೆ ಫಲಿಸದೆ ಕಾರು ಚಾಲಕ ಸಾವು
ಮೃತ ಕಾರು ಚಾಲಕನನ್ನು ಕುಂದಾಪುರ ತಾಲೂಕಿನ ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ (26) ಎಂದು ಗುರುತಿಸಲಾಗಿದೆ. ಸೋಮವಾರ ಮುಂಜಾನೆ ಉಡುಪಿಯಿಂದ ಕುಂದಾಪುರದತ್ತ ಕಾರಿನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.
ಹೆದ್ದಾರಿ ದಾಟಿ ರಸ್ತೆ ಅಂಚಿಗೆ ಬರುತ್ತಿದ್ದ ಸೈಕಲ್ಗೆ ಕಾರು ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿದ್ದ ಗ್ರಿಲ್ಗೂ ಅಪ್ಪಳಿಸಿತ್ತು ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಸ್ಥಳದಲ್ಲೇ ಸೈಕಲ್ ಸವಾರ ಸಾವು
ಅಪಘಾತದ ತೀವ್ರತೆಗೆ ಸೈಕಲ್ ಸವಾರ, ಆರ್ಎಸ್ಎಸ್ ಮುಖಂಡ ಗುರುದಾಸ ಶೆಣೈ ಅವರು ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.
ಕಾರಿನ ಚಾಲಕ ಪ್ರದೀಪ್ ಕಾಂಚನ್ ಅವರಿಗೂ ತೀವ್ರ ಗಾಯಗಳಾಗಿದ್ದರಿಂದ ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮೃತ ಪ್ರದೀಪ್ ಕಾಂಚನ್ ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. ಅವಿವಾಹಿತರಾಗಿದ್ದ ಅವರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಘಟನೆಯ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7