ಬೆಂಗಳೂರು: ವಾಲ್ಮೀಕಿ ನಿಗಮದಿಂದ ಆರಂಭವಾಗಿ ಬೆಂಗಳೂರು ರಸ್ತೆ ಗುಂಡಿಗಳನ್ನ ತುಂಬಲು ಲಕ್ಷಾಂತರ ಕೋಟಿವರೆಗೆ ಲೂಟಿ ನಡೆಯುತ್ತಿದೆ. ಸಿಕ್ಕ ಸಿಕ್ಕ ಕಡೆಯಲ್ಲಿ ಲೂಟಿ ಮಾಡುವ ಕಾಂಗ್ರೆಸ್ ಭ್ರಷ್ಟಾಚಾರ ಮಾಡದೇ ಬದುಕುವುದೇ ಇಲ್ಲ ಅಂತ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಗೂ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಅಧಿಕಾರಿಗಳು ಲೂಟಿ ಮಾಡಲು ಸರ್ಕಾರವೇ ಅವಕಾಶ ನೀಡುತ್ತಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ತಾಂಡವವಾಡುತ್ತಿದೆ. ವಾಲ್ಮೀಕಿ ನಿಗಮದಿಂದ ಆರಂಭವಾಗಿ ಬೆಂಗಳೂರು ರಸ್ತೆ ಗುಂಡಿಗಳನ್ನ ತುಂಬಲು ಲಕ್ಷಾಂತರ ಕೋಟಿವರೆಗೆ ಲೂಟಿ ನಡೆಯುತ್ತಿದೆ. ಕಸದಲ್ಲಿ ಕಂಟ್ರಾಕ್ಟರ್ ಲೂಟಿ ಮಾಡ್ತಿದ್ದಾರೆ. 50 ಕೋಟಿ, 60 ಕೋಟಿಯನ್ನು ಅವರದೇ ಕಂಪನಿಗಳಿಗೆ ಹಾಕಿಕೊಂಡಿದ್ದಾರೆ ಅಂತ ಆರೋಪಿಸಿದ್ದಾರೆ.
ಲೂಟಿ ಬಗ್ಗೆ ನಾವು ಪ್ರಸ್ತಾಪ ಮಾಡಿದರೂ ಇವರು ಕೇಳುವುದಿಲ್ಲ. ಸಚಿವ ನಾಗೇಂದ್ರ ವಿರುದ್ಧ ಸದನದಲ್ಲಿ ಹೋರಾಟ ಮಾಡ್ತಿದ್ದೇವೆ. ನಾಗೇಂದ್ರ ರಾಜೀನಾಮೆವರೆಗೆ ನಾವು ಹೋರಾಟ ಕೈ ಬಿಡುವುದಿಲ್ಲ. ನಾಗೇಂದ್ರ ಅವರನ್ನು ಕೈ ಬಿಡಲ್ಲ ಎಂದು ಸರ್ಕಾರ ಹಠಕ್ಕೆ ಬಿದ್ದಿದೆ. ಅವರಿಗೆ ಬೇಲ್ ಸಿಕ್ಕಿದೆ ಅಂತಾರೆ. ಬೇಲ್ ಎಂದರೆ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಲ್ಲ. ಅವರಿಗೆ ಕ್ಲೀನ್ ಚಿಟ್ ಸಿಕ್ಕಿಲ್ಲ. ಅವರು ಕಾಂಗ್ರೆಸ್ ಅನ್ನು ಬ್ಲಾಕ್ ಮೇಲ್ ಮಾಡಿದ್ದಕ್ಕೆ ಸಚಿವರಾಗಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರ ಹೆಸರು ಹೇಳಿಬಿಡ್ತಾರೆ ಎಂದು ಸಚಿವರಾಗಿ ಮಾಡಿದ್ದಾರೆ ಎಂದು ದೂರಿದ್ದಾರೆ.
ನಮ್ಮ ಹೋರಾಟದ ಬಿಸಿ ಹೇಗಿದೆ ಎಂದರೆ ಬಿಲದಲ್ಲಿ ಇರುವವರು ಈಗ ಹೊರ ಬಂದಿದ್ದಾರೆ. ಭ್ರಷ್ಟಾಚಾರಿಗಳು ಈಗ ಗಾಂಧಿ ಪ್ರತಿಮೆ ಮುಂದೆ ಬಂದಿದ್ದಾರೆ ಅಂತ ಕಾಂಗ್ರೆಸ್ ಪ್ರತಿಭಟನೆಗೆ ಲೇವಡಿ ಮಾಡಿದ್ರು. ನಾಗೇಂದ್ರ ವಿಷಯದ ಕುರಿತು ಚರ್ಚೆಗೆ ಬನ್ನಿ ಎಂದು ಸರ್ಕಾರ ಹೇಳುತ್ತಿದೆ. ಭ್ರಷ್ಟಾಚಾರ ಆಗಿದ್ದು ಸರ್ಕಾರ ಹಿಂದೆ ಒಪ್ಪಿಕೊಂಡಿದೆ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ. ಅವರು ಈಗಲೂ ದೋಷಿ. ಮತ್ತೆ ಯಾಕೆ ಸಚಿವರಾಗಿ ಮಾಡಿದಿರಿ ಎಂದು ಪ್ರಶ್ನಿಸಿದರು. ಹಗರಣದ ಹಣ ಎಲ್ಲಿ ಹೋಗಿದೆ ಎಂದು ವಿವರ ನೀಡಿದ್ದಾರೆ. ಚರ್ಚೆ ಬೇಡ. ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು. ನಾಗೇಂದ್ರ ರಾಜೀನಾಮೆ ಕೊಡೋವರೆಗೂ ನಮ್ಮ ಹೋರಾಟ ನಿಲ್ಲೋದಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.
Laxmi News 24×7