ಬೆಳಗಾವಿ, ಏ.೨೫(ಕರ್ನಾಟಕ ವಾರ್ತೆ): ಕೋವಿಡ್-೧೯ ಹರಡುವಿಕೆ ತಡೆಗಟ್ಟುವ ಕುರಿತು ಜನಜಾಗೃತಿ ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿರುವ ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮದ ವರದಿಗಾರರು ಮತ್ತು ಛಾಯಾಗ್ರಾಹಕರು ಸೇರಿದಂತೆ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ “ವಾರ್ತಾಭವನ”ದಲ್ಲಿ ಶನಿವಾರ (ಏ.೨೫) ಕೋವಿಡ್-೧೯ ಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಕೋವಿಡ್-೧೯ ಎಲ್ಲೆಡೆ ವ್ಯಾಪಕವಾಗಿ ಪಸರಿಸುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅತೀ ಹೆಚ್ಚು ಜನರ ಸಂಪರ್ಕಕ್ಕೆ ಬರುವ ಮಾಧ್ಯಮ ಪ್ರತಿನಿಧಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಅರೋಗ್ಯ ತಪಾಸಣೆಗೆ ಒಳಪಡುವ ಅಗತ್ಯವಿದೆ ಎಂದರು.
ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಸದಾ ನಿಕಟ ಸಂಪರ್ಕದಲ್ಲಿದ್ದು, ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಾಧ್ಯಮ ಪ್ರತಿನಿಧಿಗಳ ಆರೋಗ್ಯವನ್ನು ಕೂಡ ತಪಾಸಣೆ ನಡೆಸಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕೋವಿಡ್-೧೯ ಗೆ ಸಂಬಂಧಿಸಿದಂತೆ ತಪಾಸಣೆ ನಡೆಸಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಗುರುನಾಥ ಕಡಬೂರ ವಿವರಿಸಿದರು.
ಸೋಂಕಿನ ಲಕ್ಷಣಗಳು ಕಂಡುಬಂದವರಿಗೆ ಮಾತ್ರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗುವುದು ಎಂದು ಹೇಳಿದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಚೇರಮನ್ ಅಶೋಕ ಬಾದಾಮಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಡಿ.ಎನ್.ಮಿಸಾಳೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡುಮ್ಮಗೋಳ, ಡಾ.ಶಿವಾನಂದ ಗುಮ್ಮಗೋಳ, ಕರೊನಾ ಸ್ವಯಂಸೇವಕರಾದ ಬಸವರಾಜ ಕೋಳುಚೆ, ಅವಧೂತ ಮಾನಗೆ ಮತ್ತಿತರರು ಉಪಸ್ಥಿತರಿದ್ದರು.
ಡಾ.ಜಯಾನಂದ ಧನವಂತ, ಡಾ.ಸುಜಾತಾ ನಿಶಾನದಾರ, ಸವಿತಾ ಕಿತ್ತೂರ ಹಾಗೂ ಮಾಧುರಿ ಕೆಂಗಾರಿ ನೇತೃತ್ವದ ತಂಡವು 92 ಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳ ಆರೋಗ್ಯ ತಪಾಸಣೆ ನಡೆಸಿದರು.
ತಪಾಸಣೆಗೆ ಒಳಗಾದ ಮಾಧ್ಯಮ ಪ್ರತಿನಿಧಿಗಳ ಪೈಕಿ ಯಾರಲ್ಲಿಯೂ ಕೋವಿಡ್-೧೯ ಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದಿರುವುದಿಲ್ಲ ಎಂದು ಡಾ.ಜಯಾನಂದ ತಿಳಿಸಿದ್ದಾರೆ.
ಆರೋಗ್ಯ ತಪಾಸಣೆ ಕೈಗೊಂಡ ವೈದ್ಯಕೀಯ ತಂಡಕ್ಕೆ ಮಾಧ್ಯಮ ಪ್ರತಿನಿಧಿಗಳು ಚಪ್ಪಾಳೆ ತಟ್ಟುವ ಮೂಲಕ ಕೃತಜ್ಞತೆ ಸಲ್ಲಿಸಿದರು.