ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಡುವ ನೀಡಿದ್ದ ವರುಣದೇವ ಜಿಲ್ಲೆಯಲ್ಲಿ ಇಂದು ಮತ್ತೆ ಅಬ್ಬರಿಸಿ ಬೊಬ್ಬಿರಿದಿದ್ದಾನೆ.
ಚಿಕ್ಕಮಗಳೂರು ನಗರದಲ್ಲಿ ಸಂಜೆ ಸುಮಾರು ಅರ್ಧ ಗಂಟೆಗಳ ಕಾಲ ಧಾರಾಕಾರ ಮಳೆ ಆಗಿದೆ. ಸಂಜೆಯ ದಿಢೀರ್ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ಥಗೊಂಡಿತು. ಚಿಕ್ಕಮಗಳೂರು ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಸುರಿದ ವರ್ಷದ ಮೊದಲ ಮಳೆ ಇದಾಗಿದೆ.
ಚಿಕ್ಕಮಗಳೂರು ನಗರದಲ್ಲಷ್ಟೇ ಅಲ್ಲದೆ ಜಿಲ್ಲೆಯ ಮಲೆನಾಡು ಭಾಗದಲ್ಲೂ ಅಲ್ಲಲ್ಲಿ ಮಳೆ ಸುರಿದಿದೆ. ಕೊಪ್ಪ, ಬಾಳೆಹೊನ್ನೂರು, ಜಯಪುರ ಭಾಗದಲ್ಲೂ ಉತ್ತಮ ಮಳೆಯಾಗಿದೆ. ಬಯಲುಸೀಮೆ ತರೀಕೆರೆ ತಾಲೂಕಿನ ಸಂತವೇರಿ, ಲಿಂಗದಹಳ್ಳಿ ಭಾಗದಲ್ಲೂ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು, ಮಲ್ಲಂದೂರು ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಜಿಲ್ಲಾದ್ಯಂತ ಮೋಡಕವಿದ ವಾತಾವರಣವಿದ್ದು, ಮಲೆನಾಡಿಗರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ಘಟ್ಟಪ್ರದೇಶಗಳಲ್ಲಿ ಆಗಾಗ್ಗೆ ಮಳೆ ಸುರಿಯುತ್ತಿದ್ದು, ನಾಡಿನ ಜೀವನದಿಗಳ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.