Home / ಜಿಲ್ಲೆ / ಚಿಕ್ಕ ಮಂಗಳೂರು / ಕಾಫಿನಾಡಿನ ಪ್ರವಾಸ ಮುಂದೂಡಿ- ಜಿಲ್ಲಾಡಳಿತ ಮನವಿ………..

ಕಾಫಿನಾಡಿನ ಪ್ರವಾಸ ಮುಂದೂಡಿ- ಜಿಲ್ಲಾಡಳಿತ ಮನವಿ………..

Spread the love

ಚಿಕ್ಕಮಗಳೂರು: ದಿನೇ ದಿನೇ ಕೊರೊನಾ ಆತಂಕ ಹೆಚ್ಚುತ್ತಿದ್ದರೂ, ಇದಾವುದನ್ನೂ ಲೆಕ್ಕಿಸದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಚಿಕ್ಕಮಗಳೂರಿಗೆ ಭೇಟಿ ನೀಡುತ್ತಿದ್ದು, ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆ ಪ್ರವಾಸಿಗರು ಚಿಕ್ಕಮಗಳೂರು ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಎಂದು ಜಿಲ್ಲಾಡಳಿತ ಪ್ರವಾಸಿಗರಲ್ಲಿ ಮನವಿ ಮಾಡಿದೆ.

ಕೊರೊನಾ ಆರಂಭದ ಮೊದಲ 55 ದಿನಗಳ ಕಾಲ ಒಂದೂ ಕೊರೊನಾ ಪಾಸಿಟಿವ್ ಪ್ರಕರಣವಿಲ್ಲದ ಚಿಕ್ಕಮಗಳೂರಿನಲ್ಲಿ ಇಂದು ಸೋಂಕಿತರ ಸಂಖ್ಯೆ 70ರ ಗಡಿ ಮುಟ್ಟಿದೆ. ಬೆಂಗಳೂರಿಗೆ ಹೋಗಿ ಬರುತ್ತಿರುವ ಬಹುತೇಕರಲ್ಲಿ ಕೊರೊನಾ ಸೋಂಕು ದೃಢವಾಗುತ್ತಿದ್ದು, ಸ್ಥಳೀಯರ ಆತಂಕ ಹೆಚ್ಚಾಗಿದೆ. ಇಷ್ಟಾದರೂ ಪ್ರತಿ ದಿನ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಎಗ್ಗಿಲ್ಲದೆ ಪ್ರವಾಸಿಗರು ಬರುತ್ತಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಪ್ರವಾಸಿಗರು ಜಿಲ್ಲೆಗೆ ಬರದಂತೆ ಸರ್ಕಾರ ಎಚ್ಚರ ವಹಿಸಬೇಕೆಂದು ಸ್ಥಳೀಯರು ಗ್ರಾಮ ಪಂಚಾಯಿತಿಗಳಿಗೆ ಮನವಿ ಸಹ ಮಾಡಿದ್ದರು.

ಜೂನ್ 28ರ ಭಾನುವಾರ ಒಂದೇ ದಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ದತ್ತಪೀಠ ಭಾಗಕ್ಕೆ ಸಾವಿರಾರು ಪ್ರವಾಸಿಗರು ಬಂದಿದ್ದರು. ನೂರಾರು ವಾಹನಗಳು ಕಿ.ಮೀ.ಗಟ್ಟಲೇ ಸಾಲುಗಟ್ಟಿ ನಿಂತಿದ್ದವು. ಇದರಿಂದ ಸ್ಥಳೀಯರು ಕೂಡ ಆತಂಕಕ್ಕೀಡಾಗಿದ್ದರು. ಅಲ್ಲದೆ ಕೊರೊನಾ ಕುರಿತು ಅರಿವಿದ್ದೂ, ಸಾಮಾಜಿಕ ಅಂತರ, ಮುಖಕ್ಕೆ ಮಾಸ್ಕ್ ಹಾಕುವುದನ್ನು ಮರೆತು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದರು. ಹೀಗಾಗಿ ಸ್ಥಳೀಯರು ಭಯಭೀತರಾಗಿದ್ದರು.

ಈ ಮಧ್ಯೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ ಗುಡ್ಡಕ್ಕೆ ಬಂದ ಪ್ರವಾಸಿಗರು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಇರುವುದನ್ನು ಕಂಡ ಸ್ಥಳಿಯರು, ತಿಳಿ ಹೇಳಿದ್ದಾರೆ. ಆಗ ಪ್ರವಾಸಿಗರು ಸ್ಥಳೀಯರ ಜೊತೆ ವಾಕ್ಸಮರಕ್ಕೆ ಇಳಿದಿದ್ದರು. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ನೀರಿನ ಬಾಟಲಿ, ಬಿಯರ್ ಬಾಟಲಿ ಎಸೆಯುತ್ತಿದರೆಂದು ಸ್ಥಳಿಯರು-ಪ್ರವಾಸಿಗರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯುತ್ತಿತ್ತು.

ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ವರ್ತನೆ ಕಂಡ ಜಿಲ್ಲಾಡಳಿತ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ತಾತ್ಕಾಲಿಕವಾಗಿ ಪ್ರವಾಸವನ್ನು ರದ್ದುಗೊಳಿಸಿ ಎಂದು ಮನವಿ ಮಾಡಿದೆ.


Spread the love

About Laxminews 24x7

Check Also

ಸಾಮೂಹಿಕ ರಾಜೀನಾಮೆಗೆ ಮುಂದಾದ ಬಿಜೆಪಿ ಯುವ ಮೋರ್ಚಾ ಘಟಕ ಸದಸ್ಯರು

Spread the loveಚಿಕ್ಕಮಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕುಮಾರ್ ಹತ್ಯೆಯಾಗಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಪಕ್ಷದ ವಿರುದ್ಧವೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ