Breaking News

ಕಚೇರಿಯಲ್ಲೇ ಚಿಕ್ಕಬಳ್ಳಾಪುರ ರೈತ ಸಂಘದ ತಾಲೂಕು ಅಧ್ಯಕ್ಷ ನೇಣಿಗೆ ಶರಣು

Spread the love

ಚಿಕ್ಕಬಳ್ಳಾಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜಿನಪ್ಪ ಅವರು ನಗರದಲ್ಲಿರುವ ರೈತ ಸಂಘದ ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ಬಡಾವಣೆಯ ಹಾಲು ಉತ್ಪಾದಕರ ಸಹಕಾರ ಸಂಘದ (ಡೈರಿ) ಮೇಲ್ಭಾಗದಲ್ಲಿರುವ ರೈತ ಸಂಘದ ಕಚೇರಿಯ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳದಲ್ಲಿ ಡೆತ್‌ನೋಟ್ ಕೂಡ ಲಭ್ಯವಾಗಿದೆ.

ಡೆತ್‌ನೋಟ್‌ನಲ್ಲಿ ಏನಿದೆ?
ಪೊಲೀಸರು ವಶಪಡಿಸಿಕೊಂಡಿರುವ ಡೆತ್‌ನೋಟ್‌ನಲ್ಲಿ ಜಮೀನು ಮಾರಾಟದ ಬಾಕಿ ಹಣ ಬಾರದೆ ಮಾನಸಿಕವಾಗಿ ನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ಉಲ್ಲೇಖಿಸಲಾಗಿದೆ. ರಾಮಾಂಜಿನಪ್ಪ ಅವರು ತಮ್ಮ ಮಾಲೀಕತ್ವದ 35 ಗುಂಟೆ ಜಮೀನನ್ನು ರವೀಂದ್ರರೆಡ್ಡಿ ಎಂಬವರಿಗೆ ಒಟ್ಟು 77 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು.

ಜಮೀನು ಖರೀದಿಸಿದ್ದ ರವೀಂದ್ರರೆಡ್ಡಿ ಮುಂಗಡ ಹಾಗೂ ಕಂತುಗಳ ರೂಪದಲ್ಲಿ ಕೇವಲ 57.50 ಲಕ್ಷ ರೂ. ಮಾತ್ರ ಪಾವತಿಸಿದ್ದರು. ಉಳಿದ 19.50 ಲಕ್ಷ ರೂಪಾಯಿ ಬಾಕಿ ಹಣವನ್ನು ನೀಡದೆ ಕಳೆದ ಹತ್ತು ತಿಂಗಳುಗಳಿಂದ ಸತಾಯಿಸಿ, ಕಾಲಹರಣ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಆರ್ಥಿಕ ಸಂಕಷ್ಟ ಹಾಗೂ ಬರಬೇಕಾದ ಹಣ ಕೈಸೇರದೆ ತೀವ್ರ ಹತಾಶೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಮಾಂಜಿನಪ್ಪ ಪತ್ರದಲ್ಲಿ ಬರೆದಿದ್ದಾರೆ.

ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

ರೈತರ ಪರ ಸದಾ ಹೋರಾಟ ನಡೆಸುತ್ತಿದ್ದ ಮುಖಂಡರೊಬ್ಬರು ಕಚೇರಿಯಲ್ಲೇ ದುರಂತ ಅಂತ್ಯ ಕಂಡಿರುವುದು ಜಿಲ್ಲೆಯ ರೈತ ಸಮುದಾಯ ಮತ್ತು ಸಾರ್ವಜನಿಕರಲ್ಲಿ ತೀವ್ರ ಆಘಾತ ಹಾಗೂ ಶೋಕ ಮೂಡಿಸಿದೆ. ಡೆತ್‌ನೋಟ್ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


Spread the love

About Laxminews 24x7

Check Also

ಕೆಪಿಎಸ್‌ಸಿ ಮುಚ್ಚುವ ಬಗ್ಗೆ ಚಿಂತನೆ: ಸಿಎಂ ಡಿಕೆಶಿ

Spread the loveಬೆಂಗಳೂರು: ಕೆಪಿಎಸ್‌ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ