ಬೆಂಗಳೂರು: ಎಥೆನಾಲ್ ಉತ್ಪಾದನೆಗೆ ಅಗತ್ಯಕ್ಕಿಂತ ಹೆಚ್ಚು ಒತ್ತು ನೀಡಿದ ಕೇಂದ್ರದ ಬಿಜೆಪಿ ಸರ್ಕಾರವು ಈಗ ಶೇ.20-30ರಷ್ಟನ್ನೂ ಸ್ವೀಕರಿಸುತ್ತಿಲ್ಲ. ಇದರ ಹಿಂದೆ ಅವ್ಯವಹಾರ ನಡೆದಿದೆ ಎನ್ನುವ ರಾಹುಲ್ ಗಾಂಧಿ ಮತ್ತು ಸಚಿವ ರಿಜ್ವಾನ್ ಅರ್ಷದ್ ಆರೋಪದಲ್ಲಿ ಸತ್ಯಾಂಶವಿದೆ. ಎಥೆನಾಲ್‌ಗೆ ಸಂಬಂಧಿಸಿದಂತೆ ಈಗಿನ ಸಮಸ್ಯೆಗೆ ಕೇಂದ್ರ ಸರ್ಕಾರದ ಎಡವಟ್ಟುಗಳೇ ಕಾರಣ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ, ದೀಪಾವಳಿ ಶುಭಾಶಯ ತಿಳಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಎಂ.ಬಿ.ಪಾಟೀಲ್ ಮಾತನಾಡಿದರು.
ಎಥೆನಾಲ್ ವಿಚಾರದಲ್ಲಿ ಕೇಂದ್ರ ಸರ್ಕಾರ ಎಲ್ಲವನ್ನೂ ಗಬ್ಬೆಬ್ಬಿಸಿದೆ. ಅವರು ಮನಸ್ಸಿಗೆ ಬಂದಂತೆ ಇ-10, ಇ-20, ಇ-30 ಎಂದೆಲ್ಲ ಹೇಳುತ್ತಿದ್ದಾರೆ. ಮೊದಲು ಉತ್ಪಾದನೆ ಮಾಡುವಂತೆ ಹೇಳಿದ ಮೇಲೆ ಅದನ್ನು ಖರೀದಿಸಬೇಕು. ಆದರೆ, ಕೇಂದ್ರ ಸರ್ಕಾರವು ಶೇ.20-30 ರಷ್ಟು ಉತ್ಪಾದಿತ ಎಥೆನಾಲನ್ನೂ ಖರೀದಿಸುತ್ತಿಲ್ಲ. ಸಹಜವಾಗಿಯೇ ಕೈಗಾರಿಕೆಯವರು ಏನು ಮಾಡಬೇಕೆನ್ನುವ ಪ್ರಶ್ನೆ ಬರುತ್ತದೆ ಎಂದು ಟೀಕಿಸಿದರು.
ಎಥೆನಾಲ್ ಅನ್ನು ಪೆಟ್ರೋಲ್ ಜೊತೆ ನಿಗದಿಗಿಂತ ಹೆಚ್ಚು ಮಿಶ್ರಣ ಮಾಡಿರುವ ಕುರಿತು ತನಿಖೆ ನಡೆಯಬೇಕು ಎಂದು ರಾಹುಲ್ ಗಾಂಧಿಯವರು ಆಗ್ರಹಿಸಿರುವುದು ನ್ಯಾಯಯುತವಾಗಿದೆ. ಅವರು ಆರೋಪವನ್ನು ನಿರಾಕರಿಸಿದ ಮಾತ್ರಕ್ಕೆ ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಹಾಗೆ ನೋಡಿದರೆ, ಕೇಂದ್ರ ಸರ್ಕಾರ ತನ್ನ ತಪ್ಪನ್ನು ಯಾವತ್ತೂ ಒಪ್ಪಿಕೊಂಡಿಲ್ಲ. ರಾಜ್ಯ ಸರ್ಕಾರ ಕೂಡ ಇದರ ಬಗ್ಗೆ ಕ್ರಮ ವಹಿಸಲಿದೆ. ಆಹಾರ ಸಚಿವ ರಿಜ್ವಾನ್ ಅರ್ಷದ್ ಇದರ ಬಗ್ಗೆ ತೀರ್ಮಾನಿಸುತ್ತಾರೆ ಎಂದು ಪ್ರತಿಪಾದಿಸಿದರು.
ಹಾಸನ ಜಿಲ್ಲಾಧಿಕಾರಿಯನ್ನು ಅದೇ ಹುದ್ದೆಯಲ್ಲಿ ಮುಂದುವರಿಸಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಆಧಾರರಹಿತ ಆರೋಪ ಮಾಡಿದ್ದಾರೆ. ಬಹುಶಃ ಕುಮಾರಸ್ವಾಮಿ ತಾವು ಮುಖ್ಯಮಂತ್ರಿಗಳಾಗಿದ್ದಾಗ ಹೀಗೆ ಮಾಡಿರಬೇಕು ಎಂದು ಹರಿಹಾಯ್ದರು.
ಅವರು ಸ್ವತಃ ಮುಖ್ಯಮಂತ್ರಿಗಳಾಗಿದ್ದವರು. ಹೀಗೆಲ್ಲ ಬಾಯಿಗೆ ಬಂದಂತೆ ಮಾತನಾಡಬಾರದು. ಯಾರಾದರೂ ಜಿಲ್ಲಾಧಿಕಾರಿ ಹತ್ತಿರ ಹಣ ತೆಗೆದುಕೊಳ್ಳುತ್ತಾರೇನು? ಪ್ರತಿ ನಿತ್ಯವೂ ಇಂತಹ ಇಲ್ಲಸಲ್ಲದ ವಿಚಾರಗಳ ಬಗ್ಗೆ ಮಾತನಾಡುವುದನ್ನು ಅವರು ಬಿಡಬೇಕು ಎಂದು ಹೇಳಿದರು.
ಕುಮಾರಸ್ವಾಮಿ ಈಗ ಕೇಂದ್ರ ಕೈಗಾರಿಕಾ ಮಂತ್ರಿ. ಅವರು ಮಂಡ್ಯದಲ್ಲಿ ವಾಹನ ಪರೀಕ್ಷಾ ಮತ್ತು ತರಬೇತಿ ಕೇಂದ್ರ ಸ್ಥಾಪನೆಗೆ 100 ಎಕರೆ ಕೇಳಿದ್ದರು. ನಾವು ಅದಕ್ಕೆ ಒಪ್ಪಿಕೊಂಡಿದ್ದೆವು. ಈಗ 500 ಎಕರೆ ಬೇಕು ಅನ್ನುತ್ತಿದ್ದಾರೆ. ನಾವು ಇದಕ್ಕೂ ಸಿದ್ಧವಿದ್ದೇವೆ. ಮುಖ್ಯಮಂತ್ರಿ ತೀರ್ಮಾನ ಮಾಡ್ತಾರೆ ಎಂದು ಸ್ಪಷ್ಟಪಡಿಸಿದರು.
ಅವರು ರಾಜ್ಯಕ್ಕೆ ಪರೀಕ್ಷಾ ಮತ್ತು ತರಬೇತಿ ಕೇಂದ್ರ ತರುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ಅದೊಂದೇ ಸಾಲದು. ಅವರಿಗೆ ರಾಜ್ಯದ ಹಿತಾಸಕ್ತಿ ಮುಖ್ಯವಾಗಿದ್ದರೆ ನಾಲ್ಕು ಸೆಮಿಕಂಡಕ್ಟರ್ ಕಂಪನಿಗಳನ್ನು ತರಬೇಕು. ಆದರೆ ಇಲ್ಲಿಗೆ ಬರಲು ಆಸಕ್ತವಾಗಿರುವ ಕಂಪನಿಗಳಿಗೆ ಪಿಎಲ್ಐ ಆಸೆ ತೋರಿಸಿ ಅವುಗಳನ್ನು ಬಿಜೆಪಿ ಆಡಳಿತದ ಅಸ್ಸಾಂ, ಮಹಾರಾಷ್ಟ್ರ, ಗುಜರಾತ್ ಮುಂತಾದ ರಾಜ್ಯಗಳಿಗೆ ಕೇಂದ್ರ ಸರ್ಕಾರ ತೋರಿಸುತ್ತಿದೆ. ಇದರ ಬಗ್ಗೆ ಸೊಲ್ಲೆತ್ತಲಿ. ಅಲ್ಲದೇ, ಹೋಂಡಾ ಕಂಪನಿ ರಾಜ್ಯ ಬಿಟ್ಟು ಹೋಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಕೃಷ್ಣಾ ವಿವಾದ: ಕೇಂದ್ರ ಮತ್ತು ಮಹಾರಾಷ್ಟ್ರಕ್ಕೆ ಪತ್ರ
ಮಹಾರಾಷ್ಟ್ರ ಸರ್ಕಾರವು ಉಜ್ಜಿನಿ ಬಳಿ 40 ಟಿಎಂಸಿ ಸಾಮರ್ಥ್ಯದ ಅಣೆಕಟ್ಟು ಕಟ್ಟಲು ಮುಂದಾಗುತ್ತಿದೆ ಎನ್ನುವ ಸುದ್ದಿ ಇದೆ. ಇದು ಕೃಷ್ಣಾ ನದಿ ನೀರಿನ ವಿಚಾರದಲ್ಲಿ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಇದರ ವಿರುದ್ಧ ಕೇಂದ್ರ ಜಲ ಸಂಪನ್ಮೂಲ ಸಚಿವರು ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಮಹಾರಾಷ್ಟ್ರದ ತೀರ್ಮಾನವು ಕೃಷ್ಣಾ ನ್ಯಾಯಾಧೀಕರಣದ ತೀರ್ಪಿಗೆ ವಿರುದ್ಧವಾಗಿದೆ. ಇಂತಹ ಯೋಜನೆಗೆ ವಿಶ್ವಬ್ಯಾಂಕ್ ಹೇಗೆ ಹಣ ಕೊಡುತ್ತದೆ ಎನ್ನುವ ಪ್ರಶ್ನೆ ಬರುತ್ತದೆ ಎಂದು ಪಾಟೀಲ್ ಹೇಳಿದರು.
Laxmi News 24×7