Breaking News

ಬಾಗಲಕೋಟೆಯಲ್ಲಿ ಬರ ಅಧ್ಯಯನ ತಂಡದ ಪರಿಶೀಲನೆ: ಅಧಿಕಾರಿಗಳ ಕಾಲಿಗೆ ಬಿದ್ದು ಕಣ್ಣೀರಿಟ್ಟ ರೈತ

Spread the love

ಬಾಗಲಕೋಟೆ: ಮಳೆ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಾಗಲಕೋಟೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೇಂದ್ರ ಬರ ಅಧ್ಯಯನ ತಂಡ ಇಂದು ಭೇಟಿ ನೀಡಿ, ಒಣಗಿ ನಿಂತ ಬೆಳೆಗಳು ಹಾಗೂ ಬರ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿತು.

ಪರಿಶೀಲನೆ ವೇಳೆ ರೈತರೊಬ್ಬರು(Farmer) ಕೇಂದ್ರ ಅಧಿಕಾರಿಗಳ ಕಾಲು ಹಿಡಿದು ಕಣ್ಣೀರಿಟ್ಟ ಘಟನೆ ನಡೆದರೆ, ಮತ್ತೊಂದೆಡೆ ಕಣ್ಣೊರೆಸುವ ತಂತ್ರದ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಆಕ್ರೋಶಗೊಂಡ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬೆಳೆ ಸಮೀಕ್ಷೆಗೆ ತೆರಳುವ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಕೇಂದ್ರ ತಂಡವು ಅಧಿಕಾರಿಗಳ ಸಭೆ ನಡೆಸಿತು. ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಗಜಾನನ ಬಾಲೆ ಹಾಗೂ ಕೃಷಿ, ತೋಟಗಾರಿಕೆ ಮತ್ತು ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಜಿಲ್ಲೆಯ ಮಳೆ ಅಭಾವ, ಬೆಳೆಹಾನಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಮಗ್ರ ವರದಿಯನ್ನು ಅಧಿಕಾರಿಗಳಿಂದ ಪಡೆದ ಕೇಂದ್ರ ತಂಡ, ಬಳಿಕ ಸ್ಥಳ ಪರಿಶೀಲನೆಗೆ ತೆರಳಿತು.

ಪಾಟ್ನಾದ ಅಕ್ಕಿ ನಿರ್ದೇಶನಾಲಯದ ನಿರ್ದೇಶಕ ಡಾ. ಮಾನಸಿಂಗ್ ನೇತೃತ್ವದ ಮೂವರು ಸದಸ್ಯರ ತಂಡದಲ್ಲಿ ದೆಹಲಿಯ ವೆಚ್ಚ ಇಲಾಖೆಯ ಅಧೀನ ಕಾರ್ಯದರ್ಶಿ ಪಾರ್ಥ ಪೌಲ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ರಾಕೇಶ್ ಕುಮಾರ್ ಉಪಸ್ಥಿತರಿದ್ದರು. ಪರಿಶೀಲನೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲೆಯ ಸಂಸದರು, ಶಾಸಕರು ಹಾಗೂ ಕೃಷಿ-ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರು.

ಬೆಳಗ್ಗೆ 8:30ಕ್ಕೆ ಗುಳೇದಗುಡ್ಡ ತಾಲೂಕಿನ ಹಳದೂರು ಗ್ರಾಮಕ್ಕೆ ಭೇಟಿ ನೀಡಿದ ತಂಡ, ಹುಸೇನಬಿ ಡಾಲಾಯತ್ ರೈತ ಮಹಿಳೆಯ ಜಮೀನಿನಲ್ಲಿ ಸಮರ್ಪಕ ಮಳೆಯಿಲ್ಲದೆ ಸಂಪೂರ್ಣ ಒಣಗಿ ಹೋಗಿದ್ದ ಮೆಕ್ಕೆಜೋಳದ ಬೆಳೆಯನ್ನು ವೀಕ್ಷಿಸಿತು. ಈ ವೇಳೆ ರೈತರು ತಮಗಾದ ನಷ್ಟವನ್ನು ವಿವರಿಸಿ ಪರಿಹಾರಕ್ಕೆ ಮೊರೆಯಿಟ್ಟರು.

ಶಿರೂರಿನಲ್ಲಿ ರುದ್ರಪ್ಪ ಗಾಣಿಗೇರ ಅವರ ಒಣಗುತ್ತಿರುವ ಕಬ್ಬಿನ ಹೊಲ ಹಾಗೂ ಬಸಯ್ಯ ಲಂಗಟದ ಅವರ ಮೆಕ್ಕೆಜೋಳ ಬೆಳೆಯನ್ನು ಪರಿಶೀಲಿಸಲಾಯಿತು. ನಂದಪ್ಪ ಗುಳೇದ ಅವರ ಮೆಕ್ಕೆಜೋಳ, ಮಹಾಂತೇಶ್ ಗುಳೇದ ಅವರ ಈರುಳ್ಳಿ ಬೆಳೆ ಹಾಗೂ ಭಗವತಿ ಕ್ರಾಸ್ ವ್ಯಾಪ್ತಿಯಲ್ಲಿ ಸೂರ್ಯಕಾಂತಿ ಮತ್ತು ತೊಗರಿ ಬೆಳೆಗಳ ಹಾನಿಯನ್ನು ಪರಿಶೀಲಿಸಲಾಯಿತು.

ಬೇವೂರು ಗ್ರಾಮದಲ್ಲಿ ತೊಗರಿ ವೀಕ್ಷಣೆ ನಡೆಸಿದ ತಂಡ, ಬಳಿಕ ಹುನಗುಂದ ತಾಲೂಕಿನ ಅಮರಾವತಿ, ಇಳಕಲ್ ತಾಲೂಕಿನ ಚಿಕ್ಕಕೊಡಗಲಿ ಹಾಗೂ ಗುಗ್ಗಲಮರಿ ಕ್ರಾಸ್ ವ್ಯಾಪ್ತಿಯ ಬರಪೀಡಿತ ಹೊಲಗಳಿಗೆ ತೆರಳಿತು.

ಕಾಲಿಗೆ ಬಿದ್ದ ರೈತ!
ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ಈರುಳ್ಳಿ ಹೊಲ ವೀಕ್ಷಣೆ ಮಾಡುವ ವೇಳೆ ಮನಕಲಕುವ ಘಟನೆ ನಡೆಯಿತು. ಸಂಪೂರ್ಣ ಬೆಳೆ ಕಳೆದುಕೊಂಡು ಕಂಗಾಲಾಗಿದ್ದ ರೈತ ಶಂಕ್ರಪ್ಪ ಗೌಡರ್ ಕೇಂದ್ರ ಬರ ಅಧ್ಯಯನ ಅಧಿಕಾರಿಗಳ ಕಾಲಿಗೆ ಬಿದ್ದು ಪರಿಹಾರ ನೀಡುವಂತೆ ಗೋಗರೆದರು. ತಕ್ಷಣ ಸ್ಥಳೀಯ ಅಧಿಕಾರಿಗಳು ರೈತನನ್ನು ಹಿಡಿದು ಮೇಲೆತ್ತಿದರು.ನಮ್ಮ ಹೊಲದಲ್ಲಿ ಬೆಳೆದಿದ್ದೆಲ್ಲ ಹಾಳಾಗಿದೆ. ಕೈಯಲ್ಲಿದ್ದ ದುಡ್ಡೆಲ್ಲ ಮಣ್ಣುಪಾಲಾಗಿದೆ. ಸಂಕಷ್ಟ ತಾಳಲಾರದೆ ಅಧಿಕಾರಿಗಳ ಕಾಲು ಹಿಡಿದು ಬೇಡಿಕೊಂಡೆ ಎಂದು ಕಣ್ಣೀರಿಟ್ಟರು.

ಎಲೆ ನೋಡಬೇಡಿ, ಗಡ್ಡೆ ನೋಡಿ:
ಕೇಂದ್ರ ತಂಡದ ಕಾರ್ಯವೈಖರಿ ವಿರುದ್ಧ ಅನ್ನದಾತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ರಸ್ತೆ ಬದಿಯಲ್ಲಿ ನಿಂತು, ಹೊಲದ ಯಾವುದೋ ಒಂದು ಮೂಲೆಯಲ್ಲಿ ಕೆಲವೇ ಹೊಲಗಳನ್ನು ನೋಡಿದರೆ ಬರದ ನೈಜ ಸ್ಥಿತಿ ಹೇಗೆ ಅರ್ಥವಾಗುತ್ತದೆ? ತಂಡವು ಒಳಭಾಗದ ಹಳ್ಳಿಗಳಿಗೂ ಭೇಟಿ ನೀಡಿ ಪರಿಶೀಲಿಸಬೇಕು ಎಂದು ರೈತರು ಆಗ್ರಹಿಸಿದರು.

ಮೇಲ್ನೋಟಕ್ಕೆ ಈರುಳ್ಳಿ ಎಲೆಗಳು ಹಸಿರಾಗಿ ಕಾಣುತ್ತವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನೆಲದೊಳಗೆ ನೀರಿಲ್ಲದೆ ಗಡ್ಡೆಯೇ ಕಟ್ಟಿಲ್ಲ. ಎಲೆ ನೋಡಿ ತೀರ್ಮಾನಿಸಬೇಡಿ, ವಾಸ್ತವ ನೋಡಿ ಸೂಕ್ತ ವರದಿ ನೀಡಿ ಎಂದು ರೈತರು ತರಾಟೆಗೆ ತೆಗೆದುಕೊಂಡರು.

ನಾವು ಎಕರೆಗೆ 40 ರಿಂದ 50 ಸಾವಿರ ರೂಪಾಯಿ ಸಾಲ ಮಾಡಿ ಖರ್ಚು ಮಾಡಿದ್ದೇವೆ. ಎಲ್ಲವೂ ಮಣ್ಣುಪಾಲಾಗಿದೆ. ಈಗ ಹಿಂಗಾರು ಬಿತ್ತನೆ ಸಮಯ ಆರಂಭವಾಗಿದ್ದು, ರೈತರ ಕೈಯಲ್ಲಿ ಬಿಡಿಗಾಸಿಲ್ಲ. ಸರ್ಕಾರ ಕೂಡಲೇ ಎಕರೆಗೆ ಕನಿಷ್ಠ 1 ಲಕ್ಷ ರೂ. ಪರಿಹಾರ ನೀಡಬೇಕು. ಆಗ ಮಾತ್ರ ನಾವು ಹಿಂಗಾರು ಬಿತ್ತನೆ ಮಾಡಲು ಸಾಧ್ಯ ಎಂದು ರೈತರು ಸರ್ಕಾರಕ್ಕೆ ಒಕ್ಕೊರಲಿನಿಂದ ಒತ್ತಾಯಿಸಿದರು.


Spread the love

About Laxminews 24x7

Check Also

ಡಿಸಿಗಳು ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೆ SIT ರಚನೆ: ಪ್ರಿಯಾಂಕ್ ಖರ್ಗೆ

Spread the loveಬೆಂಗಳೂರು: ಡಿಸಿಗಳು ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಫಾರ್ಮ್-7 ದುರ್ಬಳಕೆ ಬಗ್ಗೆ ವಿಶೇಷ ತನಿಖಾ ತಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ