ಹಾಸನ (ಮಾ. 25): ಹಾಸನದಲ್ಲಿ ಮತ್ತೆ ಕೊರೋನಾ ಭೀತಿ ಹೆಚ್ಚಾಗಿದ್ದು, ಇಲ್ಲಿನ ಒಂದು ಊರಿಗೆ ಊರೇ ಹೋಂ ಐಸೋಲೇಷನ್ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ.
ಹಾಸನದ ಅರಕಲಗೂಡು ತಾಲೂಕಿನ ರಾಂಪುರ ಗ್ರಾಮದ 75 ಜನರಿಗೆ ಹೋಮ್ ಐಸೋಲೇಷನ್ನಲ್ಲಿರುವಂತೆ ಸೂಚನೆ ನೀಡಲಾಗಿದೆ. ಈ ಊರಿನ ಯಾರೂ ಮನೆಯಿಂದ ಹೊರಗೆ ಹೋಗದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಇಲ್ಲಿನ ಗ್ರಾಮಸ್ಥರ ಕೈಗೆ ಸೀಲ್ ಹಾಕಿದ್ದಾರೆ. ಮಸ್ಕತ್, ದುಬೈ, ಮಂಗಳೂರಿನಿಂದ ಬಂದಿರುವ 75 ಮಂದಿ ಈ ಗ್ರಾಮದಲ್ಲಿದ್ದಾರೆ. ಇವರೇನಾದರೂ ಮನೆಯಿಂದ ಹೊರಗೆ ಬಂದರೆ ನಿರ್ದಾಕ್ಷಿಣ್ಯವಾಗಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಮಸಾಜ್ ಮಾಡಲು, ಶಾಸ್ತ್ರ ಹೇಳಲು ವಿದೇಶಗಳಿಗೆ ಹೋಗುತ್ತಿದ್ದ ಇಲ್ಲಿನ ಗ್ರಾಮಸ್ಥರು ಕೊರೋನಾ ಸೋಂಕನ್ನು ಹೊತ್ತು ತಂದಿರುವ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಗ್ರಾಮಸ್ಥರು ಕೂಡ ಆತಂಕಿತರಾಗಿದ್ದಾರೆ. ಈ ಸ್ಥಳಕ್ಕೆ ಅರಕಲಗೂಡು ತಹಶೀಲ್ದಾರ್ ರೇಣುಕುಮಾರ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಎಲ್ಲರನ್ನೂ ಗೃಹ ದಿಗ್ಬಂಧನ (ಹೋಮ್ ಐಸೋಲೇಷನ್)ದಲ್ಲಿರುವಂತೆ ಆದೇಶ ನೀಡಿದ್ದಾರೆ.