ಬೆಂಗಳೂರು: ಮುಖ್ಯಮಂತ್ರಿ ಅವರ ʻನಮ್ಮ ಮನೆʼ ಯೋಜನೆಯಡಿ ರಾಜ್ಯದಾದ್ಯಂತ ಸಮುದಾಯದ ಶ್ರಮಿಕರಿಗೆ ಶೇ. 50ರ ರಿಯಾಯಿತಿ ದರದಲ್ಲಿ 50 ಸಾವಿರ ನಿವೇಶನಗಳನ್ನ (30 ಅಡಿ × 40 ಅಡಿ) ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.
ಇಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯೋಜನೆಯಡಿ ಕರ್ನಾಟಕ ಗೃಹ ಮಂಡಳಿ ವತಿಯಿಂದ EWS, LIG, MIG ಮತ್ತು HIG ನಿವೇಶನಗಳನ್ನ ಒಳಗೊಂಡಂತೆ, ರಾಜ್ಯದಾದ್ಯಂತ ಜಮೀನಿನ ಲಭ್ಯತೆಗೆ ಅನುಗುಣವಾಗಿ 6,600 ಎಕರೆ ಜಮೀನಿನಲ್ಲಿ ಒಟ್ಟು 93,240 ನಿವೇಶನಗಳನ್ನ ಅಂದಾಜು 11,655 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದ್ದಾರೆ.
ಇದರಲ್ಲಿ ಸಮುದಾಯದ ಶ್ರಮಿಕರಿಗೆ ಹಾಗೂ EWS ಫಲಾನುಭವಿಗಳಿಗೆ ಶೇ. 50ರ ರಿಯಾಯಿತಿ ದರದಲ್ಲಿ ಅಂದಾಜು 2,914 ಕೋಟಿ ರೂ. ವೆಚ್ಚದಲ್ಲಿ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಇದಲ್ಲದೇ, ರಾಜೀವ್ ಗಾಂಧಿ ವಸತಿ ನಿಗಮದಡಿ 1 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಇದಕ್ಕಾಗಿ 2,241 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ ಗೃಹ ಮಂಡಳಿ ವತಿಯಿಂದ ಜಿಬಿಎ ವ್ಯಾಪ್ತಿಯ ಕೆಂಗೇರಿ ಕೊಳಗೇರಿಯಲ್ಲಿ 1.20 ಎಕರೆ ಪ್ರದೇಶದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಸಂಕೀರ್ಣಕ್ಕೆ 68 ಕೋಟಿ ರೂ. ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ. ಬಿ-ಸ್ಮೈಲ್ ಯೋಜನೆಯಡಿ 130 ಕಿ.ಮೀ. ವೈಟ್ ಟಾಪಿಂಗ್ ರಸ್ತೆ ಅಭಿವೃದ್ಧಿಪಡಿಸಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, 12 ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೊಳ್ಳಲು 2,321 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದ್ದರೆ.
ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂವರೆಗೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ 1,379 ಕೋಟಿ ರೂ. ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ. ಲೋಕಾಯುಕ್ತದಲ್ಲಿ ಅವಧಿ ಮುಗಿದ 20 ಸಹಾಯಕ ಅಭಿಯೋಜಕರನ್ನು ಮುಂದುವರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.
Laxmi News 24×7