ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿದ ಬಳಿಕವೂ ಆರೋಪಿ ತನ್ನ ಕ್ರೌರ್ಯವನ್ನು ಮುಂದುವರಿಸಿದ್ದಾನೆ. ಕುಟುಂಬದವರ ಮೊಬೈಲ್‌ಗಳಿಗೆ ಬರುತ್ತಿದ್ದ ಕರೆಗಳಿಗೆ ಉತ್ತರಿಸಿ, ಯಾರಿಗೂ ಅನುಮಾನ ಬರದಂತೆ ನೋಡಿಕೊಂಡಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲ, ಅಮಾಯಕ ಬಾಲಕನನ್ನೇ ಬಳಸಿಕೊಂಡು ಸಂಬಂಧಿಕರಿಗೆ ಸುಳ್ಳು ಮಾಹಿತಿ ಕೊಡಿಸಿದ್ದಾನೆ. ಇದೀಗ ಬಾಲಕ ಮಾತನಾಡಿರುವ ಆಡಿಯೋ ಬಹಿರಂಗವಾಗಿದ್ದು, ಪ್ರಕರಣದ ತನಿಖೆಯಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
ಏಳು ಮಂದಿ ಹತ್ಯೆ ಬಳಿಕ ಆರೋಪಿ ಇಂದುಶೇಖರ್ ಮೃತರ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಸಂಬಂಧಿಕರು ಕರೆ ಮಾಡಿದಾಗ ಕೆಲವೊಮ್ಮೆ ತಾನೇ ಮಾತನಾಡುತ್ತಿದ್ದ. ಇನ್ನು ಕೆಲವೊಮ್ಮೆ ಬಾಲಕನ ಕೈಗೆ ಫೋನ್ ಕೊಟ್ಟು ಮಾತನಾಡಿಸುತ್ತಿದ್ದ ಎಂಬ ಸಂಗತಿ ತನಿಖೆಯಲ್ಲಿ ತಿಳಿದುಬಂದಿದೆ. ಶಿವಕುಮಾರ್ ಮತ್ತು ದಿವ್ಯ ದಂಪತಿಯ ಹತ್ಯೆಯ ಬಳಿಕ ಅವರ ಪುತ್ರ ಪುನೀತ್‌ನನ್ನು ತನ್ನೊಂದಿಗೆ ಇರಿಸಿಕೊಂಡಿದ್ದ ಆರೋಪಿ, ಆತನಿಂದಲೂ ಸಂಬಂಧಿಕರ ಕರೆಗಳಿಗೆ ಉತ್ತರ ಕೊಡಿಸಿದ್ದಾನೆ. ಬಳಿಕ ಆ ಬಾಲಕನನ್ನೂ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಇದೇ ರೀತಿ ಶಂಕರ್ ಮತ್ತು ನಳಿನಿ ದಂಪತಿಯ ಪುತ್ರ ಯತಿನ್‌ನನ್ನೂ ತನ್ನೊಂದಿಗೆ ಕರೆದೊಯ್ದಿದ್ದಾನೆ.
ಇದೀಗ ಬಹಿರಂಗವಾಗಿರುವ ಆಡಿಯೋದಲ್ಲಿ ಯತಿನ್ ಸಂಬಂಧಿಕರೊಂದಿಗೆ ಮಾತನಾಡಿರುವುದು ಕೇಳಿಬಂದಿದೆ. ನಳಿನಿ ಜೊತೆ ಒಮ್ಮೆಯಾದರೂ ಮಾತನಾಡಿಸು, ಮನಸ್ಸಿಗೆ ಸಮಾಧಾನವಾಗುತ್ತದೆ ಎಂದು ಸಂಬಂಧಿಕರು ಮನವಿ ಮಾಡಿದ್ದಾರೆ. ನಳಿನಿಯ ತಾಯಿ ತುಂಗಮ್ಮ ಕೂಡ ಮಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಯತಿನ್ ನೀಡಿರುವ ಉತ್ತರವೇ ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ. ಅಪ್ಪ-ಅಮ್ಮ ಬಸ್‌ನಲ್ಲಿದ್ದಾರೆ, ತಾವು ಟ್ರಿಪ್‌ಗೆ ಬಂದಿದ್ದೇವೆ. ಬಸ್‌ನಲ್ಲಿ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ, ಟ್ರಿಪ್ ಮುಗಿಸಿ ವಾಪಸ್ ಬರಲು ಮೂರು ತಿಂಗಳು ಬೇಕಾಗುತ್ತದೆ ಎಂದೂ ತಿಳಿಸಿದ್ದಾನೆ. ಬಸ್ ಹತ್ತಲು ಕರೆಯುತ್ತಿದ್ದಾರೆ, ತಾನು ಹೋಗಬೇಕು ಎಂದು ಬಾಲಕ ಆಡಿಯೋದಲ್ಲಿ ಹೇಳಿದ್ದಾನೆ.
ಇದೇ ವೇಳೆ ಸಂಬಂಧಿಕರು ಪುನೀತ್ ಎಲ್ಲಿ ಎಂದು ಪ್ರಶ್ನಿಸಿದಾಗ, ಪುನೀತ್ ಕೂಡ ನಮ್ಮ ಜೊತೆಯಲ್ಲೇ ಇದ್ದಾನೆ. ನಾವೆಲ್ಲರೂ ಬಸ್‌ನಲ್ಲಿದ್ದೇವೆ ಎಂದು ಯತಿನ್ ಉತ್ತರಿಸಿದ್ದಾನೆ. ಕುಟುಂಬ ಸದಸ್ಯರ ಹತ್ಯೆಯ ವಿಚಾರ ಹೊರಬರದಂತೆ ಆರೋಪಿ ಬಾಲಕನಿಂದಲೇ ಇಂತಹ ಸುಳ್ಳು ಮಾಹಿತಿ ಕೊಡಿಸಿದ್ದಾನೆ ಎಂಬ ಅನುಮಾನ ಈ ಆಡಿಯೋದಿಂದ ಮತ್ತಷ್ಟು ಗಟ್ಟಿಯಾಗಿದೆ.
ಸಂಬಂಧಿಕರು ಈ ಆಡಿಯೋವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆಡಿಯೋದ ಸತ್ಯಾಸತ್ಯತೆ ಹಾಗೂ ಅದರ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಈಗಾಗಲೇ ಏಳು ಮಂದಿಯ ಹತ್ಯೆ ಪ್ರಕರಣದಲ್ಲಿ ಹಲವು ಆಘಾತಕಾರಿ ಸಂಗತಿಗಳು ಹೊರಬಂದಿದ್ದು, ಈ ಹೊಸ ಆಡಿಯೋ ತನಿಖೆಗೆ ಮಹತ್ವದ ಸುಳಿವಾಗಿದೆ.
Laxmi News 24×7