ಅಹಮದಾಬಾದ್: ಲಕ್ನೋದಿಂದ ಸೌದಿ ಅರೇಬಿಯಾದ ದಮ್ಮಾಮ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ‘ಬಾಂಬ್’ ಎಂದು ಬರೆಯಲಾಗಿದ್ದ ಟಿಶ್ಯೂ ಪೇಪರ್ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.
ಗುರುವಾರ ಸಂಜೆ ಸುಮಾರು 5:55ಕ್ಕೆ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಸಿಬ್ಬಂದಿ ಸೇರಿದಂತೆ ಒಟ್ಟು 133 ಮಂದಿ ವಿಮಾನದಲ್ಲಿದ್ದರು. ತುರ್ತು ಲ್ಯಾಂಡಿಂಗ್ ಬಳಿಕ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಯಿತು.
ಟಿಶ್ಯೂ ಪೇಪರ್‌ನಲ್ಲಿ `ಬಾಂಬ್’ ಎಂಬ ಪದ ಕಂಡುಬಂದ ಹಿನ್ನೆಲೆಯಲ್ಲಿ ವಿಮಾನದಲ್ಲಿ ಭದ್ರತಾ ಆತಂಕ ಸೃಷ್ಟಿಯಾಗಿತ್ತು. ಘಟನೆಯ ನಿಖರ ಕಾರಣ ಹಾಗೂ ಸಂದೇಶವನ್ನು ಬರೆದವರು ಯಾರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಘಟನೆ ಕುರಿತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ, ಅಗ್ನಿಶಾಮಕ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ಸೇರಿದಂತೆ ಹಲವು ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ವಿಮಾನವನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ.
ಪ್ರಯಾಣಿಕರಿಂದ ಹ್ಯಾಂಡ್‌ರೈಟಿಂಗ್ ಸ್ಯಾಂಪಲ್:
ತನಿಖೆಯ ಭಾಗವಾಗಿ ವಿಮಾನದಲ್ಲಿದ್ದ ಪ್ರಯಾಣಿಕರಿಂದ ಹಸ್ತಾಕ್ಷರ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರಯಾಣಿಕರಿಗೆ ಟಿಶ್ಯೂ ಪೇಪರ್‌ನಲ್ಲಿ ಬರೆಯಲು ಸೂಚಿಸಲಾಗಿದ್ದು, ಅವರ ಬರವಣಿಗೆಯನ್ನು `ಬಾಂಬ್’ ಸಂದೇಶವಿದ್ದ ಟಿಶ್ಯೂ ಪೇಪರ್‌ನ ಬರವಣಿಗೆಯೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.
ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಕಳೆದ 10 ದಿನಗಳಲ್ಲಿ ವಿಮಾನವೊಂದು ತುರ್ತು ಲ್ಯಾಂಡಿಂಗ್ ಮಾಡಿರುವುದು ಇದು ಎರಡನೇ ಪ್ರಕರಣವಾಗಿದೆ. ಇದಕ್ಕೂ ಮೊದಲು ಏರ್ ಇಂಡಿಯಾ ವಿಮಾನವೊಂದು ಅಹಮದಾಬಾದ್‌ನಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. ಆ ಪ್ರಕರಣದ ತನಿಖೆಯಲ್ಲಿ ವಿಮಾನದ ಸಿಬ್ಬಂದಿಯೊಬ್ಬರ ಹೆಸರು ಕೂಡ ಮುನ್ನೆಲೆಗೆ ಬಂದಿತ್ತು.
Laxmi News 24×7