ಬೆಂಗಳೂರು: ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಯುವತಿಯೊಬ್ಬಳಿಗೆ ʼನಿನ್ ರೇಟ್ ಎಷ್ಟುʼ ಅಂತ ಕಿರುಕುಳ ನೀಡಿದ ಶೋಚನೀಯ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ನಡೆದಿದೆ. ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಆಕೆಯನ್ನು ಕಂಡ ತಕ್ಷಣ ಅಸಭ್ಯವಾಗಿ ಮಾತನಾಡಿಸಿ, ಲೈಂಗಿಕವಾಗಿ ನಿಂದಿಸುತ್ತಾ ರೇಟ್ ಎಷ್ಟು? ಎಂದು ಕೇಳಿ ಕಿರುಕುಳ ನೀಡಿದ್ದಾನೆ.
ಘಟನೆಯಿಂದ ಧೃತಿಗೆಡದ ಧೈರ್ಯವಂತ ಯುವತಿ, ತಕ್ಷಣವೇ ತನ್ನ ಮೊಬೈಲ್ ತೆಗೆದು ಆತನ ಕೃತ್ಯವನ್ನು ವೀಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾರೆ. ನಿನ್ನ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಎಚ್ಚರಿಸಿದರೂ, ಆತ ಕ್ಯಾರೇ ಎನ್ನದೆ ಅವಾಚ್ಯ ಪದಗಳಿಂದ ನಿಂದನೆ ಮುಂದುವರಿಸಿದ್ದಾನೆ. ಆದರೆ, ತನ್ನ ಮುಖ ಮತ್ತು ವಾಹನದ ಸಂಖ್ಯೆ ಮೊಬೈಲ್‌ನಲ್ಲಿ ಸಂಪೂರ್ಣವಾಗಿ ರೆಕಾರ್ಡ್ ಆಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಕಾಮುಕ ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ, ಯುವತಿ ಆ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ನಗರದಲ್ಲಿ ಒಂಟಿಯಾಗಿ ನಿಲ್ಲಲು ಭಯವಾಗುವ ಪರಿಸ್ಥಿತಿ ಬಂದಿದೆಯೇ ಎಂದು ಕಳವಳ ವ್ಯಕ್ತಪಡಿಸಿರುವ ಅವರು, ವೀಡಿಯೋ ಸಮೇತ ಬೆಂಗಳೂರು ನಗರ ಪೊಲೀಸರನ್ನು ಟ್ಯಾಗ್ ಮಾಡಿ, ಆರೋಪಿಯ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
Laxmi News 24×7