ಬೆಳಗಾವಿ: ಎಂಎಸ್ಐಎಲ್ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಕಾಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಕೋವಿಡ್-19 ನಿಯಂತ್ರಣ ಕುರಿತು ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ನಡೆದ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ದೆಹಲಿಯ ತಬ್ಲಿಘಿ ಧಾರ್ಮಿಕ ಸಭೆಗೆ ಹೋಗಿಬಂದಿರುವವರು ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಹೋಗುವುದು ರೂಢಿ. ಆದ್ದರಿಂದ ಅಂತಹವರನ್ನು ಪತ್ತೆಹಚ್ಚುವ ಕೆಲಸ ತುರ್ತಾಗಿ ನಡೆಸಬೇಕು. ಇಲ್ಲದಿದ್ದರೆ ಸೋಂಕು ಇನ್ನಷ್ಟು ಹರಡುತ್ತದೆ. ಯಾವುದೇ ಕಾರಣಕ್ಕೂ ಇಂತಹ ಸ್ಥಿತಿ ಉದ್ಭವಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಹೋಟೆಲ್ ಅಥವಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಇರಿಸುವ ಬಗ್ಗೆ ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಒಟ್ಟಾರೆ ಸಮಾಜದ ಹಿತದೃಷ್ಟಿಯಿಂದ ಎಲ್ಲ ಜನಪ್ರತಿನಿಧಿಗಳು ಜತೆಗೂಡಿ ಕೆಲಸ ಮಾಡಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಯಾರೂ ಮಧ್ಯಪ್ರವೇಶಿಸದೇ ಜಿಲ್ಲಾಧಿಕಾರಿಗಳು ಮುಕ್ತವಾಗಿ ಕ್ರಮಕೈಗೊಳ್ಳಲು ಅವಕಾಶ ನೀಡೋಣ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಶಾಸಕರಾದ ಅನಿಲ್ ಬೆನಕೆ, ಲಕ್ಷ್ಮೀ ಹೆಬ್ಬಾಳ್ಕರ್, ಆನಂದ ಮಾಮನಿ, ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಸೇರಿದಂತೆ ಮುಂತಾದವರು ಇದ್ದರು.