ಬಾಗಲಕೋಟೆ: ಕೊರೊನಾ ವೈರಸ್ ಗೆ ಜಿಲ್ಲೆಯಲ್ಲಿ ಮೊದಲ ಬಲಿ(ರೋಗಿ ನಂಬರ್. 125)ಯಾಗಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
75 ವರ್ಷದ ವೃದ್ಧ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಿರಾಣಿ ಹಾಗೂ ಅಡುಗೆ ಎಣ್ಣೆ ವರ್ತಕರಾಗಿದ್ದ ವೃದ್ಧ ಮಾರ್ಚ್ 31ರಂದು ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ವೃದ್ಧ ಯಾವುದೇ ವಿದೇಶ, ರಾಜ್ಯ, ಪರ ಜಿಲ್ಲೆಗೂ ಪ್ರವಾಸ ಮಾಡಿರಲಿಲ್ಲ. ಗುರುವಾರ ವೃದ್ಧನಿಗೆ ಸೋಂಕು ತಗುಲಿರೋದು ದೃಢಪಟ್ಟಿತ್ತು. ವೃದ್ಧನ ಮಗ ಮತ್ತು ಮಗಳು ಹತ್ತು ದಿನಗಳ ಹಿಂದೆ ಬೆಂಗಳೂರಿನಿಂದ ಬಾಗಲಕೋಟೆಗೆ ಬಂದಿದ್ದರು .
ಇಬ್ಬರ ವರದಿಯೂ ನೆಗಟಿವ್ ಬಂದಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ವೃದ್ಧ ನವನಗರದಲ್ಲಿ ವಾಸವಾಗಿದ್ದರು. ವೃದ್ಧನ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾತ್ರಿಯೇ ಕೊರೊನಾ ನಿಯಮಗಳಿನುಸಾರವಾಗಿ ಕಡಿಮೆ ಜನರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ರಾಜೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಸೋಂಕಿತ ವ್ಯಕ್ತಿಯನ್ನು ಕಳೆದ 15 ದಿನಗಳಲ್ಲಿ ಯಾರು ಸಂಪರ್ಕ ಹೊಂದಿದ್ದಾರೆಯೋ ಅವರನ್ನು ಪತ್ತೆ ಹಚ್ಚುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೇ ಸೋಂಕಿತ ವ್ಯಕ್ತಿಯನ್ನು ಸಂಪರ್ಕಿಸಿದವರು ಸ್ವಯಂ ಪ್ರೇರಿತರಾಗಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ್ ಬಿರಾದಾರ (9449843160) ಅವರನ್ನು ಕೂಡಲೇ ಸಂಪರ್ಕಿಸಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿಗಳು ಕೋರಿದರು. ಡಯಾಲಿಸಿಸ್ ಮಾಡುವಂತ ರೋಗಿಗಳನ್ನು ಕುಮಾರೇಶ್ವರ, ಸುಭಾಷ್ ಮತ್ತು ಕೆರೂಡಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.