ಬಾಗಲಕೋಟೆ: ಬರಹ ಮತ್ತು ಓದು ಕೇವಲ ಯಾಂತ್ರಿಕ ಪ್ರಕ್ರಿಯೆಗಳಲ್ಲ. ಅವು ಪ್ರಭಾವ ಹಾಗೂ ಭಾವತೀವ್ರತೆಯನ್ನು ದೀರ್ಘಕಾಲ ಉಳಿಸುವ ಸಾಮರ್ಥ್ಯ ಹೊಂದಿವೆ. ವಿನಯತೆ ಮತ್ತು ವಿಚಾರಧಾರೆಗಳು ಕವಿಗಳನ್ನು ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂದು ಹಿರಿಯ ವಿದ್ವಾಂಸ ಡಾ. ಜಿ.ಎಸ್. ಮರೆಗುದ್ದಿ ಹೇಳಿದರು.
ಬಿ.ವಿ.ವಿ. ಸಂಘದ ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ, ಕನ್ನಡ ನುಡಿವೇದಿಕೆಯ ಚಟುವಟಿಕೆಗಳ ಉದ್ಘಾಟನೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕವಿಗಳು ಮತ್ತು ಕಾವ್ಯಗಳನ್ನು ಓದುವಾಗ ಅವುಗಳಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಚನ ಸಾಹಿತ್ಯದ ಕುರಿತು ಮಾತನಾಡಿದ ಅವರು, ಜನಭಾಷೆಯನ್ನೇ ದೇವಭಾಷೆಯನ್ನಾಗಿಸಿಕೊಂಡು ಸರಳ ಕನ್ನಡದಲ್ಲಿ ವಿಚಾರಗಳನ್ನು ಅಭಿವ್ಯಕ್ತಿಪಡಿಸಿದ ಪರಂಪರೆಯನ್ನು ವಿವರಿಸಿದರು. ಕಾವ್ಯಕ್ಕೆ ವಿಶಿಷ್ಟ ಶಕ್ತಿಯಿದ್ದು, ಪ್ರಾಚೀನ ಕವಿಗಳು ತಮ್ಮ ಅಂಕಿತನಾಮಗಳ ಮೂಲಕ ತಮ್ಮ ಆಧ್ಯಾತ್ಮಿಕ ನಂಬಿಕೆಯನ್ನು ವ್ಯಕ್ತಪಡಿಸುತ್ತಿದ್ದರು ಎಂದರು.
ಸಂಘದ ಆಡಳಿತಾಧಿಕಾರಿ ಡಾ. ವಿ.ಎಸ್. ಕಟಗಿಹಳ್ಳಿಮಠ ಮಾತನಾಡಿ, ಡಾ. ಜಿ.ಎಸ್. ಮರೆಗುದ್ದಿ ಅವರ ‘ಪೂರ್ವಸೂರಿಗಳ ಸನ್ನಿಧಾನ’ ಕೃತಿಯು ಕಾಲ, ಮನುಷ್ಯ ಮತ್ತು ಬದುಕಿನ ನಡುವಿನ ವಿಶಿಷ್ಟ ಸಂಬಂಧವನ್ನು ಪರಿಚಯಿಸುತ್ತದೆ. ಆಧುನಿಕ ಸಂಘರ್ಷಗಳಿಗೆ ಪ್ರಾಚೀನ ಚಿಂತನೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ವಿಚಾರಗಳನ್ನು ಈ ಕೃತಿ ಒಳಗೊಂಡಿದೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಮಾತನಾಡಿ, ಕನ್ನಡ ನುಡಿವೇದಿಕೆಯು ಸಾಹಿತ್ಯ ಸಂಭ್ರಮಕ್ಕೆ ವೇದಿಕೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಅಧ್ಯಯನ ಮಾಡುವ ಆಸಕ್ತಿಯನ್ನು ಬೆಳೆಸಬೇಕು. ಡಿಜಿಟಲ್ ಆಧಾರಿತ ಅಧ್ಯಯನ ಮಾತ್ರದಿಂದ ವಿಷಯದ ಆಳವನ್ನು ಸಂಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ ಎಂದರು.
‘
ಪೂರ್ವಸೂರಿಗಳ ಸನ್ನಿಧಾನ’ ಕೃತಿ ಕುರಿತು ಉಪನ್ಯಾಸ
ನವನಗರದ ಜಿ.ಎಫ್.ಜಿ.ಸಿ. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ.ಜಿ. ಹಿರೇಮಠ ಮಾತನಾಡಿ, ಪೂರ್ವಸೂರಿಗಳ ಸಾಹಿತ್ಯವು ಕೇವಲ ದಾಖಲೆಗಳಾಗಿರದೆ ಅನುಭೂತಿಯ ಮೂಲಕ ಚರಿತ್ರೆಯನ್ನು ಅರ್ಥೈಸಲು ನೆರವಾಗುತ್ತದೆ. ಓದು ಸಂಸ್ಕಾರವೇ ಅಥವಾ ತರಬೇತಿಯೇ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಡಿ. ಕೆಂಗಲಗುತ್ತಿ ಮಾತನಾಡಿ, ಕವಿರಾಜಮಾರ್ಗದ ಕಾಲಘಟ್ಟದಿಂದ ಆಧುನಿಕ ಸಾಹಿತ್ಯ ಪರಂಪರೆಯವರೆಗಿನ ಕನ್ನಡ ಸಾಹಿತ್ಯ ಸಂಸ್ಕೃತಿಯ ವಿವಿಧ ಮಗ್ಗುಲುಗಳನ್ನು ಈ ಕೃತಿ ಪರಿಚಯಿಸುತ್ತದೆ. ಬದುಕಿನ ಅನುಭವ ಮತ್ತು ಅನುಭೂತಿಯೊಂದಿಗೆ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಕನ್ನಡ ಪ್ರಜ್ಞೆಯನ್ನು ಲೇಖಕರು ಮೂಡಿಸಿದ್ದಾರೆ ಎಂದರು.
ಕನ್ನಡ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವೀಣಾ ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ. ಎ.ಯು. ರಾಠೋಡ, ಉಪನ್ಯಾಸಕರಾದ ಡಾ. ಬಸವರಾಜ ಕುಂಭಾರ, ಶ್ರೀಹರಿ ದೂಪದ, ಆರ್. ಆಯ್. ಗೌಡರ್ ಸೇರಿದಂತೆ ವಿವಿಧ ಮಹಾವಿದ್ಯಾಲಯಗಳ ಕನ್ನಡ ಉಪನ್ಯಾಸಕರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Laxmi News 24×7